ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ದೊಡ್ಡ ಚುನಾವಣಾ ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ನಡೆಸಲು ಸಾಧ್ಯವಿಲ್ಲ ಮತ್ತು ಅಂತಹ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂದು ನೀತಿ ಆಯೋಗದ ಸದಸ್ಯ ಹಾಗೂ ಭಾರತದ ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿಕೆ ಪಾಲ್ ಅವರು ಗುರುವಾರ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.
ಆದಾಗ್ಯೂ, ರಾಜಕೀಯ ಪಕ್ಷಗಳು ಇಂತಹ ದೊಡ್ಡ ಪ್ರಮಾಣದ ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ತಾವಾಗಿಯೇ ನಿಲ್ಲಿಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಈ ಮೂಲಕ ಅಂತಹ ದೊಡ್ಡ ಕಾರ್ಯಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ತಾನು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಸೂಚನೆ ರವಾನಿಸಿದೆ.
ಡಿಸೆಂಬರ್ 27, 2021 ರಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ಪೋಲ್ ಅಧಿಕಾರಿಗಳ ನಡುವೆ ಸಭೆ ನಡೆಸಲಾಗಿತ್ತು. ಅಲ್ಲಿ ಅವರು ಕೋವಿಡ್ ರೂಪಾಂತರಿ ಓಮಿಕ್ರಾನ್ ಸಾಂಕ್ರಾಮಿಕ ಸಮಯದಲ್ಲಿ ಮತದಾನವನ್ನು ಸುರಕ್ಷಿತ ರೀತಿಯಲ್ಲಿ ನಡೆಸಲು ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸಿದ್ದರು.
ಚುನಾವಣಾ ಆಯೋಗವು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲು ಸಿದ್ಧವಾಗಿದೆ. ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗೆ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
ಏತನ್ಮಧ್ಯೆ, ಈ ವಾರ ನಿಗದಿಯಾಗಿದ್ದ ನಾಲ್ಕು ಮ್ಯಾರಥಾನ್ ರ್ಯಾಲಿಂಗಳನ್ನು ಕಾಂಗ್ರೆಸ್ ರದ್ದುಗೊಳಿಸಿದೆ ಮತ್ತು ದೇಶದಲ್ಲಿ ಕೋವಿಡ್ ಸೋಂಕುಗಳ ಹಠಾತ್ ಏರಿಕೆಯ ಮಧ್ಯೆ ಮುಂದಿನ 15 ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ಯಾವುದೇ ದೊಡ್ಡ ರ್ಯಾಲಿಗಳನ್ನು ನಡೆಸದಿರಲು ನಿರ್ಧರಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆಸಿ ವೇಣುಗೋಪಾಲ್ ಅವರು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಜನರ ಆರೋಗ್ಯವನ್ನು ಮುಖ್ಯವಾಗಿಟ್ಟುಕೊಂಡು ಚುನಾವಣಾ ರ್ಯಾಲಿಗಳನ್ನು ನಡೆಸುವ ಬಗ್ಗೆ ನಿರ್ಧರಿಸಲು ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

