ನವದೆಹಲಿ: ಐದು ರಾಜ್ಯಗಳ ವಿಧಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ಮತ್ತು ಸಾಂಸ್ಥಿಕ ಬದಲಾವಣೆಗಳನ್ನು ಸೂಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಐವರು ಹಿರಿಯ ನಾಯಕರನ್ನು ನೇಮಕ ಮಾಡಿದ್ದಾರೆ.
ಚುನಾವಣಾ ಸೋಲಿನ ನಂತರ ರಾಜೀನಾಮೆ ನೀಡುವಂತೆ ರಾಜ್ಯ ಘಟಕಗಳ ಮುಖ್ಯಸ್ಥರಿಗೆ ಸೂಚಿಸಿದ ಮಾರನೇ ದಿನವೇ ಸೋನಿಯಾ ಗಾಂಧಿ ಅವರು ಈ ನೇಮಕ ಮಾಡಿದ್ದಾರೆ.
ಗೋವಾ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ರಾಜ್ಯಸಭಾ ಸಂಸದೆ ರಜನಿ ಪಾಟೀಲ್, ಮಣಿಪುರಕ್ಕೆ ಜೈರಾಮ್ ರಮೇಶ್ ಮತ್ತು ಪಂಜಾಬ್ ಸೋಲಿನ ಬಗ್ಗೆ ಪರಾಮರ್ಶೆ ನಡೆಸುವಂತೆ ಅಜಯ್ ಮಾಕೆನ್ ಅವರಿಗೆ ಸೂಚಿಸಲಾಗಿದೆ.
ಉತ್ತರ ಪ್ರದೇಶ ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕ ಜಿತೇಂದ್ರ ಸಿಂಗ್ ಮತ್ತು ಉತ್ತರಾಖಂಡ ಚುನಾವಣಾ ಸೋಲಿನ ಬಗ್ಗೆ ಅವಿನಾಶ್ ಪಾಂಡೆ ಅವರು ಪರಾಮರ್ಶೆ ನಡೆಸಲಿದ್ದಾರೆ.
"ಕಾಂಗ್ರೆಸ್ ಅಧ್ಯಕ್ಷರು ಚುನಾವಣಾ ಸೋಲಿನ ಪರಾಮರ್ಶೆ ನಡೆಸಲು ಐವರು ನಾಯಕರನ್ನು ನೇಮಿಸಿದ್ದಾರೆ ಮತ್ತು ಅವರಿಗೆ ಶಾಸಕ ಅಭ್ಯರ್ಥಿಗಳು ಮತ್ತು ಪ್ರಮುಖ ನಾಯಕರಿಂದ ಮಾಹಿತಿ ಪಡೆದು ರಾಜ್ಯಗಳಲ್ಲಿ ಸಾಂಸ್ಥಿಕ ಬದಲಾವಣೆಗಳ ಬಗ್ಗೆ ಸಲಹೆ ನೀಡುವಂತೆ ಸೂಚಿಸಲಾಗಿದೆ" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.




