ಯಕ್ಷಗಾನ ತರಬೇತಿ ಕೇಂದ್ರಗಳು ಯಕ್ಷಗಾನದ ಸಮಗ್ರ ಅಧ್ಯಯನ ಕೇಂದ್ರವಾಗಲಿ : ಯೋಗೀಶ ರಾವ್ ಚಿಗುರುಪಾದೆ
0
ಮಾರ್ಚ್ 17, 2022
ಉಪ್ಪಳ : ಯಕ್ಷಗಾನ ತರಬೇತಿ ಕೇಂದ್ರಗಳು ಯಕ್ಷಗಾನದ ಸಮಗ್ರ ಕಲಿಕಾ ಅಧ್ಯಯನ ಕೇಂದ್ರವಾಗಲಿ, ಹಾಗೂ ತರಬೇತಿ ಕೇಂದ್ರಗಳಲ್ಲಿ ಹಿಮ್ಮೇಳ ಮುಮ್ಮೇಳ ಅಭ್ಯಾಸದ ಜತೆಯಲ್ಲೇ ಪ್ರಸಂಗ ಅಧ್ಯಯನ, ರಂಗನಡೆ, ಪುರಾಣ ಕಲಿಕೆ, ಹಿರಿಯ ಕಲಾವಿದರಿಂದ ಪ್ರಾತ್ಯಕ್ಷಿಕೆ ನಡೆಸುವಂತಾಗ ಬೇಕು. ಪೂರ್ವರಂಗ ಹಾಗೂ ಸಂಪೂರ್ಣ ಅಭ್ಯಾಸದ ತರುವಾಯ ರಂಗಪ್ರವೇಶ ನಡೆಸುವಂತಾಗ ಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅಭಿಪ್ರಾಯ ಪಟ್ಟರು.
ಉಪ್ಪಳ ಸಮೀಪದ ಪ್ರತಾಪನಗರದಲ್ಲಿ ಹಿರಿಯ ಯಕ್ಷಗಾನ ಗುರು, ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆಗೊಂಡಿರುವ ರಾಮ ಸಾಲ್ಯಾನ್ ಮಂಗಲ್ಪಾಡಿ ಅವರ ನಿರ್ದೇಶನ ಹಾಗೂ ಅವರಿಂದ ಯಕ್ಷಗಾನ ತರಬೇತಿ ಪಡೆಯುತ್ತಿರುವ ಶ್ರೀ ಗೌರಿಗಣೇಶ ಕೃಪಾ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪ ನಗರ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಒಂದು ಆರಾಧನಾ ಕಲೆ. ಕಲೆಯಮೇಲೆ ಭಕ್ತಿ ಭಾವದಿಂದ ಸತತ ಅಭ್ಯಾಸ, ಪರಿಶ್ರಮದಿಂದ ಕಲಾ ವಿದ್ಯಾರ್ಥಿಯೋರ್ವ ಶ್ರೇಷ್ಟ ಕಲಾವಿದನಾಗಿ ಬೆಳೆಯುವುದಕ್ಕೆ ಸಾಧ್ಯ ಎಂದು ಅವರು ಈ ಸಂದರ್ಭ ತಿಳಿಸಿದರು.
ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಶೆಟ್ಟಿ ಪರಪ್ಪು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಕೇರಳ ಸರ್ಕಾರದ ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಶಂಕರ ರೈ ಮಾಸ್ತರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ನಮ್ಮ ಹಿರಿಯ ಯಕ್ಷಗಾನ ಕಲಾವಿದರ ಕೊಡುಗೆ ಯಕ್ಷಗಾನಕ್ಕೆ ಅಪಾರವಾದದ್ದು. ಹಿರಿಯರ ಶ್ರಮ ಕಲಾ ಸೇವೆ ಯಿಂದಾಗಿ ಇಂದು ಯಕ್ಷಗಾನ ಮೇಳೈಸುತ್ತಿದೆ. ಇಂತಹ ಕಲೆಯನ್ನು ಮುಂದಿನ ತಲೆಮಾರಿಗೆ ಕೈದಾಟಿಸ ಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಗೌರಿಗಣೇಶ ಯಕ್ಷಗಾನ ಅಧ್ಯಯನ ಯಶಸ್ವಿಯಾಗಿ ಆ ಕಾರ್ಯ ನೆರವೇರಿಸಲಿ ಎಂದು ಶುಭ ಹಾರೈಸಿದರು.
ಹಿರಿಯ ಕವಿ , ಸಾಹಿತಿ, ಕೇರಳ ತುಳು ಅಕಾಡೆಮಿ ಸದಸ್ಯ ರಾಧಾಕೃಷ್ಣ ಉಳಿಯತ್ತಡ್ಕ ಶುಭಾಶಂಸನೆ ಗೈದರು. ಯಕ್ಷಗುರು ರಾಮ ಸಾಲ್ಯಾನ್ ಮಂಗಲ್ಪಾಡಿ, ಗೌರಿಗಣೇಶ ಮಂದಿರದ ಅಧ್ಯಕ್ಷ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಉಪಸ್ಥಿತರಿದ್ದರು. ಸುಜಿತ್ ಕುಮಾರ್ ಬೇಕೂರು ಕಾರ್ಯಕ್ರಮ ನಿರ್ವಹಿಸಿದರು.
Tags




