ದೇವರೊಂದಿಗೆ ಭಾವನಾತ್ಮಕ ಸಂಬಂಧವಿರಬೇಕು: ಕಾಣಿಯೂರು ಶ್ರೀ: ಮವ್ವಾರು ತಲೆಬೈಲು ಶ್ರೀ ಕಾಣಿಯೂರು ಶ್ರೀ ನರಸಿಂಹ ದೇವರ ಮಠದಲ್ಲಿ ಆಶೀರ್ವಚನ
0
ಮಾರ್ಚ್ 17, 2022
ಮುಳ್ಳೇರಿಯ: ದೇವರು ನಮ್ಮಿಂದ ಪಡೆದುಕೊಳ್ಳುವ ಸೇವೆಗಳು ನಮ್ಮ ಒಳಿತಿಗಾಗಿ. ದೇವರಿಗೂ ನಮಗೂ ಭಾವನಾತ್ಮಕವಾದ ಸಂಬಂಧವಿರಬೇಕು. ಶುದ್ಧ ಮನಸ್ಸಿನಿಂದ ಮಾಡುವ ಸಮರ್ಪಣೆ ದೇವರಿಗೆ ಪ್ರಿಯವಾಗುತ್ತದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿದರು.
ಮವ್ವಾರು ಚಳ್ಳಂತಡ್ಕ ತಲೆಬೈಲು ಶ್ರೀ ಕಾಣಿಯೂರು ಶ್ರೀ ನರಸಿಂಹ ದೇವರ ಮಠದಲ್ಲಿ ಮಂಗಳವಾರ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ತಲೆಬೈಲು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಜವಾಬ್ದಾರಿಯು ಊರಿಗೂ ಮಠಕ್ಕೂ ಅಗತ್ಯವಿದೆ ಎಂಬುದನ್ನು ನಾವು ಮನಗಾಣಬೇಕಿದೆ ಎಂದು ಹೇಳುತ್ತಾ ಜೀರ್ಣೋದ್ಧಾರ ಕಾರ್ಯವು ಅತಿಶೀಘ್ರದಲ್ಲಿ ನೆರವೇರಲಿ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಉತ್ತಮ ಕಾರ್ಯಕ್ಕೆ ಯೋಗ್ಯವಾದ ಕಾಲ ಕೂಡಿಬರಬೇಕಾಗಿದೆ. ನಾವು ಯಾರು, ನಮ್ಮ ಕರ್ತವ್ಯಗಳು ಏನು ಎಂಬುದನ್ನು ತಿಳಿದು ಅದನ್ನು ನಾವು ಪೂರೈಸಬೇಕಿದೆ. ಪ್ರಸ್ತುತ ನಮ್ಮೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಕಾಲ ಒದಗಿಬಂದಿದ್ದು, ದಾನಿಯೊಬ್ಬರು ಸೋಪಾನಪೀಠವನ್ನು ನೀಡಿ ಚಾಲನೆಯನ್ನೂ ನೀಡಿದ್ದಾರೆ. ಮುಂದಿನ ವರ್ಷದೊಳಗೆ ಜೀರ್ಣೋದ್ಧಾರ ಕಾರ್ಯವು ನಡೆಸಬೇಕೆಂಬ ಸಂಕಲ್ಪದೊಂದಿಗೆ ಭಕ್ತಾದಿಗಳೆಲ್ಲರೂ ಒಂದುಗೂಡಬೇಕಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸಂಜೀವ ಶೆಟ್ಟಿ ಮೊಟ್ಟೆಕುಂಜ ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರೀಮಠದ ಚರಿತ್ರೆ, ಮುಂದಿನ ಕಾರ್ಯಯೋಜನೆಗಳ ಕುರಿತಾಗಿ ವಿವರಣೆಯನ್ನು ನೀಡಿದರು. ಕೋಶಾಧಿಕಾರಿ ದಾಮೋದರ ಮಣಿಯಾಣಿ ಚಳ್ಳಂತಡ್ಕ, ಶ್ರೀ ಮಠದ ಮಂಜುನಾಥ ಉಡುಪ ಉಪಸ್ಥಿತರಿದ್ದರು. ಶ್ರೀದೇವರಿಗೆ ಸೋಪಾನ ಪೀಠವನ್ನು ಸಮರ್ಪಣೆ ಮಾಡಿದ ಸೇವಾಕರ್ತ ಗುರುಪ್ರಸಾದ್ ಆಚಾರ್ಯ ಅವರನ್ನು ಶ್ರೀಗಳು ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು. ಉದಯ ಕುಮಾರ್ ಮವ್ವಾರು ನಿರೂಪಿಸಿದರು. ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು, ಭಕ್ತಾದಿಗಳು ಪಾಲ್ಗೊಂಡಿದ್ದರು.
Tags




