ಶ್ರೀನಗರ: ಉಗ್ರ ಸಂಘಟನೆಗಳು ತಮ್ಮ ಪಾಕಿಸ್ತಾನಿ ಕಾರ್ಯಕರ್ತರ ಗುರುತನ್ನು ಮರೆಮಾಚಲು ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡಿದ್ದು, ಬಯೋಮೆಟ್ರಿಕ್ ಐಡಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಬಲಪಡಿಸುವಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ(ಯುಐಡಿಎಐ) ಮನವಿ ಮಾಡಲಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರು ದುರುಪಯೋಗಪಡಿಸಿಕೊಳ್ಳುತ್ತಿರುವ ಆಧಾರ್ ಕಾರ್ಡ್‌ನ ನೈಜ-ಸಮಯದ ಮಾಹಿತಿಯನ್ನು ಪಡೆಯಲು ಕಾರ್ಯವಿಧಾನ ರೂಪಿಸುವಂತೆ ಕಾಶ್ಮೀರ ಪೊಲೀಸರು ಸಲಹೆ ನೀಡಿದ್ದಾರೆ.
ಶ್ರೀನಗರದ ದಾಲ್ ಸರೋವರದ ಪಕ್ಕದ ಬಿಷೇಂಬರ್ ನಗರದಲ್ಲಿ ಇತ್ತೀಚೆಗೆ ಇಬ್ಬರು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಿದ ನಂತರ ಬಯೋಮೆಟ್ರಿಕ್ ಐಡಿ ದುರ್ಬಳಕೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ಈ ತಿಂಗಳ ಆರಂಭದಲ್ಲಿ ಸಿಆರ್‌ಪಿಎಫ್ ಯೋಧರ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಮೊಹಮ್ಮದ್ ಭಾಯ್ ಅಲಿಯಾಸ್ ಅಬು ಖಾಸಿಮ್ ಎಂದು ಗುರುತಿಸಲಾಗಿದ್ದು, ಆತ 2019 ರಿಂದ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದು, 2021 ರಿಂದ ಅಬು ಅರ್ಸಲಾನ್ ಅಲಿಯಾಸ್ ಖಾಲಿದ್ ಎಂಬ ಹೆಸರಿನಲ್ಲಿ ಸಕ್ರಿಯವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಜಮ್ಮುವಿನ ವಿಳಾಸ ಹೊಂದಿದ್ದ ಎರಡು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಂತರ ಪೊಲೀಸರು ಆಧಾರ್ ಕಾರ್ಡ್ ಗಳನ್ನು ಪರಿಶೀಲಿಸಿದಾಗ ಆಧಾರ್ ಸಂಖ್ಯೆಗಳು ನಿಜವೆಂದು ಕಂಡುಬಂದಿದೆ. ಆದರೆ ಕಾರ್ಡ್‌ಗಳ ಮೇಲೆ ಅವುಗಳ ಪಾಸ್‌ಪೋರ್ಟ್ ಗಾತ್ರದ ಚಿತ್ರಗಳನ್ನು ಅಳವಡಿಸಲಾಗಿದೆ. ನಿಜವಾದ ಆಧಾರ್ ಕಾರ್ಡ್ ವೆಬ್‌ಕ್ಯಾಮ್‌ನಲ್ಲಿ ಕ್ಲಿಕ್ ಮಾಡಿದ ಚಿತ್ರವನ್ನು ಒಳಗೊಂಡಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





