ಉಪ್ಪಳ: ಮಾರುಕಟ್ಟೆಯಲ್ಲಿ ಸಾವಿರಾರು ಜನ ಸೇರುತ್ತಾರೆ . ಆದರೆ ವಜ್ರದಂಗಡಿಗೆ ಅಗತ್ಯ ಇರುವವರು ಮಾತ್ರ ಬರುತ್ತಾರೆ. ನಮ್ಮ ಕಾಸರಗೋಡಿನಲ್ಲಿ ಕನ್ನಡ ಮರೆಯಾಗುತ್ತಿರುವ ಈ ಕಾಲದಲ್ಲಿ ಭಾಷೆ ಮತ್ತು ದೇಶದ ಸಂಸ್ಕøತಿಯನ್ನು ಕಾಯುವ ಉದ್ದೇಶಕ್ಕಾಗಿ ಕನ್ನಡದ ಚಿಂತನೆ ಅತ್ಯಗತ್ಯ. ಕತ್ತಲೆಯಾದರೆ ದೀಪಹಚ್ಚುತ್ತೇವಲ್ಲ ಹಾಗೆ ಕನ್ನಡಿಗರು ಕನ್ನಡದ ರಕ್ಷಣೆಗೆ ಮನ ಮಾಡಬೇಕು. ಮುಖ್ಯವಾಗಿ ಹೊಸ ಪೀಳಿಗೆಗೆ ಕನ್ನಡ ಭಾಷಾ ಸಾಹಿತ್ಯ ದಾಟಿ ಬರಬೇಕು ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ತಿಳಿಸಿದರು.
ಶಂ.ಪಾ.ಪ್ರತಿಷ್ಠಾನ ಬೆಂಗಳೂರು ಸಂಸ್ಥೆಯು ಗುರುವಾರ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ವರ್ತಮಾನದ ಸಂದರ್ಭದಲ್ಲಿ ಹಳೆಗನ್ನಡದ ಪ್ರಸ್ತುತತೆ ಎಂಬ ವಿಷಯದ ಬಗೆಗಿನ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಕಸಾಪ ಕೇಂದ್ರ ಘಟಕದ ಮಾಜೀ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಸರಕಾರವೂ ಕನ್ನಡದ ಮೇಲೆ ಅವಜ್ಞೆ ತೋರುತ್ತಿರುವುದಕ್ಕೆ ಖೇದ ವ್ಯಕ್ತಪಡಿಸುತ್ತ ಕರ್ನಾಟಕದಲ್ಲೆ ಕನ್ನಡ ಉಳಿಸುವುದು ಸವಾಲಾಗುತ್ತಿದೆ. ತಾವು ನಡೆಸುವ ಆಂಗ್ಲ ಮಾಧ್ಯಮ ಶಾಲೆಗಳ ಕುರಿತು ಅಪಾರ ಕಾಳಜಿ ತೋರುವ ರಾಜಕಾರಣಿಗಳು ಕನ್ನಡ ಶಾಲೆಗಳು ಮರೆಯಾಗುವ ವಿದ್ಯಮಾನವನ್ನು ಗಮನಿಸುವುದಿಲ್ಲ. ಏಳು ತರಗತಿಗಳಿಗೆ ಒಬ್ಬನೇ ಅಧ್ಯಾಪಕ ಇದ್ದರೆ ಮಕ್ಕಳ ಗತಿ ಏನು? ಸಾವಿರಾರು ಶಾಲೆಗಳು ಮುಚ್ಚಲ್ಪಡುವುದರ ಹಿಂದೆ ಇಂಥ ಸಮಸ್ಯೆಗಳಿವೆ. ಆಹ್ಲಾದ ಹಂಚುವ ಸಾಹಿತ್ಯ ಕೃತಿಗಳ ಮುದ್ರಣ ಅಷ್ಟೊಂದು ಸುಲಭವಲ್ಲ. ತದನಂತರ ಮಾರಾಟವೂ ಕಷ್ಟ. ಓದು ಕಡಿಮೆಯಾಗುತ್ತಿರುವುದೂ ಆತಂಕದ ವಿಷಯ. ಪ್ರಕಟಣೆಗೆ ಗೌರವ ಲಭಿಸಿದರೆ ಒಳ್ಳೇದಿತ್ತು . ಅಧ್ಯಕ್ಷನಾಗಿದ್ದಾಗ ನಾನು ಈ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದುಂಟು ಎಂದರು.
ಶಂ.ಪಾ.ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳಾ ಮಾಧವ ಸಂಘಟನೆಯ ಧ್ಯೇಯವನ್ನು ಪರಿಚಯಿಸುತ್ತ ಪುಸ್ತಕಗಳ ಪ್ರಕಟಣೆ, ಕನ್ನಡ ಗೊತ್ತಿಲ್ಲದವರಿಗೆ ಭಾಷಾ ತರಗತಿಯ ನೆರವನ್ನು ಬೆಂಗಳೂರಲ್ಲೂ ನಡೆಸಿಕೊಂಡು ಬರುತ್ತಿರುವ ಮತ್ತಿತರ ಚಟುವಟಿಕೆಗಳ ಮಾಹಿತಿ ನೀಡಿದರು .
ವಿಜಯಾಕಾಲೇಜು , ಬೆಂಗಳೂರುನ ಪ್ರಾಧ್ಯಾಪಕ ಡಾ . ಎಸ್ ಎಲ್ ಮಂಜುನಾಥ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ . ಶ್ರೀ ಕೃಷ್ಣ ಭಟ್ ಅವರು ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಪರವಾಗಿ ಡಾ . ಪ್ರಮೀಳಾ ಸಂಪಾದಿಸಿದ ನಾಡೋಜ ಸಿದ್ದಲಿಂಗಯ್ಯ ಕುರಿತಾದ " ಬೆಳ್ಳಿ ಕಿರಣ " ಎಂಬ ಬೃಹತ್ ಕೃತಿಯನ್ನೂ " ಮಂಥನ " ಎಂಬ ಪ್ರಮೀಳಾ ಅವರ ಇನ್ನೊಂದು ಕೃತಿಯನ್ನೂ ಬಿಡುಗಡೆಗೊಳಿಸಿದರು.
ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಇಪ್ಪತ್ತೆರಡು ಕೃತಿಗಳ ಕರ್ತೃ , ಮುಂಬೈ ವಿ ವಿ ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ವಸಂತಕುಮಾರ ತಾಳ್ತಜೆ ಅವರು ಪಂಪಯುಗ ಹಾಗೂ ಹಿನ್ನೆಲೆಯ ಬೌದ್ಧ ಸಾಹಿತ್ಯ ದ ಪರಿಚಯ ಮಾಡಿಕೊಟ್ಟರು.
ಸಹಾಯಕ ಪ್ರಾಧ್ಯಾಪಕ ಡಾ . ಶ್ರೀಧರ ಎನ್ ಅವರು ಪಂಪ ಪೂರ್ವ ಯುಗದ ಹಳೆಗನ್ನಡ ಸಾಹಿತ್ಯದ ವಿಶ್ವರೂಪವನ್ನು ಮನೋಜ್ಞವಾಗಿ ಪರಿಚಯಿಸಿದರು. ಡಾ. ಚಂದ್ರಕಲಾ ನಂದಾವರ ಹಾಗೂ ಡಾ.ಯು.ಮಹೇಶ್ವರಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಡಾ. ರತ್ನಾಕರ ಮಲ್ಲಮೂಲೆ ಅವರು ಸಾಹಿತ್ಯ ಕೃತಿಗಳ ಒಳನೋಟ ಮುಂದಿಟ್ಟರು. ಡಾ. ಪಿ ಶ್ರೀಕೃಷ್ಣ ಭಟ್ ಮಧ್ಯಕಾಲೀನ ಸಾಹಿತ್ಯದ ಪ್ರಾಮುಖ್ಯತೆ ಏನೆಂಬುದನ್ನು ವಿವರಿಸಿದರು. ಸಂವಾದದಲ್ಲಿ ಚಿತ್ರಲಿಂಗಯ್ಯ, ಶಿವರುದ್ರಯ್ಯ, ಮಂಜುನಾಥ ಪಾಳ್ಯ ಭಾಗವಹಿಸಿದರು.
ಸಮಾರೋಪ
ಸಮಾರೋಪ ಭಾಷಣ ಮಾಡಿದ ನಿವೃತ್ತ ವಿಭಾಗ ಮುಖ್ಯಸ್ಥ ಡಾ. ಹರಿಕೃಷ್ಣ ಭರಣ್ಯ ಅವರು ಕನ್ನಡದ ವಿವಿಧ ರೂಪಗಳ ತೌಲನಿಕ ನೋಟ , ಅವುಗಳ ಪದ ಸಂಪತ್ತು , ಇತರ ದ್ರಾವಿಡ ಭಾಷೆಗಳಲ್ಲಿ ಕಾಣಿಸುವ ಕನ್ನಡದ ಪದಗಳು , ಕನ್ನಡದಿಂದ ಸ್ವೀಕರಿಸಲ್ಪಟ್ಟ ಸಂಗತಿಗಳು ಹೇಗೆ ಅಧ್ಯಯನ ಯೋಗ್ಯವಾಗಿವೆ ಎಂಬುದನ್ನು ವಿವರಿಸಿದರು. ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವೈದ್ಯ, ಸಾಹಿತಿ ಡಾ ರಮಾನಂದ ಬನಾರಿ ಮಾತನಾಡಿ, ಪ್ರಸ್ತುತತೆ ಚರ್ಚೆಯ ವಿಷಯವಾಗಬೇಕಾದ್ದಿಲ್ಲವೆಂದು ಲಘುವಾಗಿ ಕುಟುಕಿದರು. ನಾನು ಸಾಹಿತ್ಯದ ಪರೋಕ್ಷ ವಿದ್ಯಾರ್ಥಿ . ಆದರೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಮಾರುಹೋದವನು. ವೈದ್ಯಕೀಯ ಪಠ್ಯದಲ್ಲೂ ಸಾಹಿತ್ಯವನ್ನು ಕಂಡಿದ್ದೇನೆ . ಯಾವ ಭಾಷೆಯೂ ಆಯಾಕಾಲದ ಸಾಹಿತ್ಯ ಬಳಸಿ ಶ್ರೀಮಂತವಾಗುತ್ತದೆ . ಹಾಗಾಗಿ ಅದು ಮತ್ತೆ ಮತ್ತೆ ಅಧ್ಯಯನಯೋಗ್ಯವೆನಿಸುತ್ತದೆ . ಶಬ್ದಗಳು ನಷ್ಟವಾದರೆ ಶ್ರೀಮಂತಿಕೆಯನ್ನು ಕಳಕೊಂಡಂತಾಗುವುದು . ನಾಗರಿಕ ಸಂಪತ್ತು ಎಷ್ಟೇ ಇರಲಿ ಮುಖ್ಯವಲ್ಲ . ಜಾನಪದದಿಂದ ಹಿಡಿದು ಪಂಪ ರನ್ನರಂತಹ ಮಹತ್ವದ ಕೃತಿಗಳ ಅಧ್ಯಯನ ನಮ್ಮ ಕರ್ತವ್ಯ . ಜೊತೆಗೆ ಕನ್ನಡದ ಪದಗಳು ಮಾತ್ರ ಸಾಕೆಂದು ಅಷ್ಟರಿಂದಲೇ ಕಾವ್ಯ ಹೆಣೆದವರೂ ಕನ್ನಡದಲ್ಲಿದ್ದಾರೆ . ಶಾಸ್ತ್ರೀಯವೋ ಸಂಪದ್ಭರಿತವೋ ಆಗಿ ಸಾಹಿತ್ಯ ಸೆಳೆಯ ಬೇಕಿದ್ದರೆ ಈ ವೈವಿಧ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದರು .
ದ. ಕ ಗಮಕ ಪರಿಷತ್ತಿನ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಹಾಗೂ ಅವರ ಸುಪುತ್ರ ವಿಷ್ಣು ಪ್ರಸಾದರು ಕಾವ್ಯವಾಚನ ನಡೆಸಿದರು.
ಪ್ರತಿಷ್ಠಾನದ ಡಾ . ಶಾರದಾ ಮತ್ತು ಕಾರ್ಯದರ್ಶಿ ಡಾ. ಎಸ್ ಎಲ್ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.ಪ್ರೊ. ಪಿ ಎನ್ ಮೂಡಿತ್ತಾಯ ವಂದಿಸಿದರು. ಸಾಧನಕೇರಿ ಸಂಘಟನೆ ಸದಸ್ಯ ಶಿವಾನಂದ ಮತ್ತು ಬೆಂಗಳೂರಿನ ಮಂಜುನಾಥ್ ಸಹಕರಿಸಿದರು. ಐಸಿರಿ ಪ್ರಕಾಶನದ ಮಂಜುನಾಥ ಪಾಳ್ಯ ಮಂಥನ ಕೃತಿಯ ಮುದ್ರಣವನ್ನು ಅಚ್ಚುಕಟ್ಟಾಗಿ ಮಾಡಿದ್ದು ಅಭಿನಂದನಾರ್ಹವಾಯಿತು.

.jpg)
.jpg)
.jpg)
.jpg)
