ಮಧೂರು: ಮೊಗೇರ ಸರ್ವೀಸ್ ಸೊಸೈಟಿ ರಾಜ್ಯ ಸಮಿತಿ ವತಿಯಿಂದ 'ಮೊಗೇರ ಮಹಾ ಸಂಗಮ-2022'ಕಾರ್ಯಕ್ರಮ ಮಧೂರು ಗ್ರಾಪಂನ ಉಳಿಯತ್ತಡ್ಕದ ಅಟಲ್ ಸಭಾಂಗಣದ ಸುಬೇದರ್ ಕಮಲಾಕ್ಷ ಕುಂಬಳೆ ವೇದಿಕೆಯಲ್ಲಿ ಭಾನುವಾರ ಜರುಗಿತು.
ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಸವಲತ್ತು ಪಡೆದುಕೊಳ್ಳಲು ಮೊಗೇರ ಸಮುದಯ ಸಂಘಟಿತ ಪ್ರಯತ್ನ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಮೊಗೇರ ಸೇವಾ ಸಂಘದ ರಾಜ್ಯಾಧ್ಯಕ್ಷ ಎ.ಕೆ. ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಕವಿ ರಾಧಾಕೃಷ್ಣ ಉಳಿಯತ್ತಕ್ಕ, ಮೀಂಜ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಬಾಬು ಕುಳೂರು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಕೆ. ಪಿ. ಸಂಪತ್ ಕುಮಾರ್, ಜಿಲ್ಲಾ ಮೊಗೇರ ಸರ್ವೀಸ್ ಸೊಸೈಟಿ ಅಧ್ಯಕ್ಷ ಯು. ಬಾಬು ಪಚ್ಲಂಪಾರೆ ಹಾಗೂ ರಾಜ್ಯ ಉಪಾಧ್ಯಕ್ಷೆ ಗಿರಿಜಾ ತಾರಾನಾಥ ಕುಂಬಳೆ ಉಪಸ್ಥಿತರಿದ್ದರು.
ಈ ಸಂದರ್ಭ ಪರಿಶಿಷ್ಟ ಜಾತಿಗೆ ವಿಶೇಷ ನೇಮಕಾತಿ ಮರು ಸ್ಥಾಪಿಸಬೇಕು, ಲೈಫ್ ಪಟ್ಟಿಯಿಂದ ಪರಿಶಿಷ್ಟ ಜಾತಿಯನ್ನು ಹೊರತುಪಡಿಸಿ ಅಭಿವೃದ್ಧಿ ಇಲಾಖೆ ಮೂಲಕ ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಡಬೇಕು, ಕಾಸರಗೋಡು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ವಿಶೇಷ ಕೋಚಿಂಗ್ ಸೆಂಟರ್ ಸ್ಥಾಪಿಸಬೇಕು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.25 ಮೀಸಲಾತಿ ಒದಗಿಸಬೇಕು, ಮಧೂರು ದೇವಸ್ಥಾನದ ಒಳಾಂಗಣದಲ್ಲಿ ಮದರು ಮಾತೆಯ ಶಿಲಾಮೂರ್ತಿ ಪ್ರತಿಷ್ಠಾಪಿಸಬೇಕು, ಎಲ್ಲಾ ಮೊಗೇರ ದೈವಪಾತ್ರಿಗಳಿಗೆ ಮಾಸಾಶನವನ್ನು ಪಾವತಿಸಿಸುಂತೆ ಸರ್ಕಾರವನ್ನು ಠರಾವಿನ ಮೂಲಕ ಒತ್ತಾಯಿಸಲಾಯಿತು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಕೆ. ಸ್ವಾಮಿ ಕೃಪಾ ಸ್ವಾಗತಿಸಿದರು. ಮೋಹನ ಮಂಜೇಶ್ವರ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಗೌರವಾರ್ಪಣೆ, ಜಾನಪದ ಕಲೆಗಳ ಪ್ರದರ್ಶನ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.



