ನವದೆಹಲಿ: 2011ರಲ್ಲಿ ಪಿ. ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ 263 ಚೀನಾ ದೇಶದ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರನ್ನು 9 ಗಂಟೆಗಳ ಕಾಲ ಸಿಬಿಐ ಗುರುವಾರ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ವಿಶೇಷ ಕೋರ್ಟ್ ಅನುಮತಿಯೊಂದಿಗೆ ಯುಕೆ ಮತ್ತು ಯುರೋಪ್ ಗೆ ತೆರಳಿದ್ದ ಕಾರ್ತಿ ಚಿದಂಬರಂ ದೇಶಕ್ಕೆ ಆಗಮಿಸಿದ 16 ಗಂಟೆಯೊಳಗೆ ಸಿಬಿಐ ವಿಚಾರಣೆಗೆ ಸಹಕರಿಸಬೇಕೆಂದು ವಿಶೇಷ ನ್ಯಾಯಾಲಯವೊಂದು ಆದೇಶ ಹೊರಡಿಸಿತ್ತು.
ಬುಧವಾರ ವಿದೇಶದಿಂದ ಆಗಮಿಸಿದ ಕಾರ್ತಿ ಚಿದಂಬರಂ, ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿಚಾರಣೆ ಎದುರಿಸಿದ್ದಾರೆ.ಎ ಎಂದು ಅಧಿಕಾರಿ ಜೋಶಿ ತಿಳಿಸಿದ್ದಾರೆ.
263 ಚೀನಾದ ಕೆಲಸಗಾರರಿಗೆ ವೀಸಾ ಒದಗಿಸಲು ಪಂಜಾಬ್ ನಲ್ಲಿ ವಿದ್ಯುತ್ ಘಟಕವೊಂದನ್ನು ನಿರ್ಮಿಸಿರುವ ವೇದಾಂತ ಗ್ರೂಪ್ ಕಂಪನಿಯ ಉನ್ನತ ಕಾರ್ಯನಿರ್ವಾಹಕರಿಂದ ಕಾರ್ತಿ ಮತ್ತು ಅವರ ಆಪ್ತ ಎಸ್ ಭಾಸ್ಕರರಮಣ್ ಅವರಿಂದ 50 ಲಕ್ಷ ಲಂಚ ಪಡೆದಿದ್ದಾರೆ ಎಂದು ಸಿಬಿಐ ಎಫ್ ಐಆರ್ ನಲ್ಲಿ ದಾಖಲಿಸಿದೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಕಾರ್ತಿ ತಳ್ಳಿ ಹಾಕಿದ್ದಾರೆ.
ಈ ಕಾರ್ತಿ ಚಿದಂಬರಂ ಅವರನ್ನು ಮೇ 30ರವರೆಗೆ ಬಂಧಿಸದಂತೆ ರೂಸ್ ಅವೆನ್ಯೂ ಕೋರ್ಟ್ ಗುರುವಾರ ಮಧ್ಯಂತರ ರಕ್ಷಣೆಯನ್ನು ಒದಗಿಸಿದೆ. ಕಾರ್ತಿ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂಕೆ ನಾಗ್ ಪಾಲ್ ಗುರುವಾರ ಮಧ್ಯಂತರ ರಕ್ಷಣೆಯ ಆದೇಶ ಹೊರಡಿಸಿದ್ದಾರೆ.


