HEALTH TIPS

ಮುಂಗಾರು: ಆಶಾದಾಯಕ ಮುನ್ಸೂಚನೆ- ಮಳೆಗಾಲದ ಸಿದ್ಧತೆ ಈಗಲೇ ಪ್ರಾರಂಭಿಸಿ

             ಪ್ರಸಕ್ತ ವರ್ಷದ ಮುಂಗಾರು ವಾಡಿಕೆಯಂತೆಯೇ ಇರಲಿದ್ದು, ಕೆಲವೆಡೆ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟಿದೆ. ದೇಶದ ಕೃಷಿಕವರ್ಗದ ಪಾಲಿಗೆ ಈ ಮುನ್ಸೂಚನೆಯು ತಂಗಾಳಿಯಂತೆ ಹಿತಾನುಭವವನ್ನು ನೀಡಿದ್ದರೆ ಸೋಜಿಗವೇನಿಲ್ಲ.

            ವಾಡಿಕೆ ಪ್ರಮಾಣದಲ್ಲಿ ಮಳೆ ಸುರಿದರೆ ಕೃಷಿ ಹಾಗೂ ಕೃಷಿ ಸಂಬಂಧಿ ಉದ್ಯಮಗಳ ಚಟುವಟಿಕೆಗಳು ಗರಿಗೆದರಲಿದ್ದು, ಹಣದುಬ್ಬರ ತಹಬಂದಿಗೆ ಬರುವ ಸಾಧ್ಯತೆ ಇದೆ. ಬೆಲೆ ಏರಿಕೆ ನಿಯಂತ್ರಣಕ್ಕೂ ಇದರಿಂದ ಅವಕಾಶವಾಗಲಿದೆ. ಆದ್ದರಿಂದಲೇ ಮುಂಗಾರಿನ ಮೇಲೆ ಎಲ್ಲರ ಕಣ್ಣೂ ನೆಟ್ಟಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಆಶಾದಾಯಕವಾಗಿದ್ದರೂ ಒಳಹೊಕ್ಕು ನೋಡಿದಾಗ ಕೆಲವು ಆತಂಕಕಾರಿ ಅಂಶಗಳೂ ಅದರಲ್ಲಿವೆ. ಮುಂಗಾರು ಅವಧಿಯಲ್ಲಿನ ಸರಾಸರಿ ಮಳೆ ಪ್ರಮಾಣ ವಾಡಿಕೆಯಂತಿದ್ದರೂ ಕೆಲಭಾಗಗಳಲ್ಲಿ ಇದ್ದಕ್ಕಿದ್ದಂತೆ ವಿಪರೀತ ಮಳೆ ಸುರಿಯುವ, ಭರ್ತಿ ಮಳೆಗಾಲದಲ್ಲೂ ದೀರ್ಘಕಾಲದವರೆಗೆ 'ಶುಷ್ಕ ದಿನ'ಗಳನ್ನು ಕಾಣುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ಮಳೆಗಾಲದ ಯಾವುದೇ ಕೆಲವು ದಿನಗಳಲ್ಲಿ ಇಡೀ ಋತುವಿನ ಮಳೆ ಸುರಿದು, ಮಿಕ್ಕ ದಿನಗಳು ಶುಷ್ಕವಾಗಿ ಉಳಿದರೆ ಕೃಷಿ ಚಟುವಟಿಕೆಗಳು ದಿಕ್ಕು ತಪ್ಪಲಿವೆ. ಋತುವಿನ ಆರಂಭದ ಕೆಲವು ವಾರಗಳವರೆಗೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗಲಿದ್ದು, ನಂತರದ ದಿನಗಳಲ್ಲಿ ಸಂಪೂರ್ಣ ಕ್ಷೀಣಿಸುವ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗಿದೆ. ಈ ಮುನ್ಸೂಚನೆ ಸಂಪೂರ್ಣ ನಿಜವಾದರೆ ಬಿತ್ತನೆ ಸಂದರ್ಭದಲ್ಲಿ ಮಳೆಯಿಂದ, ಕೊಯ್ಲು ಹತ್ತಿರವಾದಾಗ ಮಳೆ ಅಭಾವದಿಂದ ಕೃಷಿಕ ಸಮುದಾಯ ಸಂಕಷ್ಟಕ್ಕೆ ಸಿಲುಕಲಿದೆ.

           ಕೇರಳದಲ್ಲಿ ಜುಲೈ ತಿಂಗಳಿನಲ್ಲಿ ವಿಪರೀತ ಮಳೆ ಸುರಿಯುವ ಸಾಧ್ಯತೆಯಿದೆ ಎಂಬ ಅಂಶ ಕೂಡ ಮುನ್ಸೂಚನೆಯಲ್ಲಿ ಇದೆ. ಮುಂಗಾರಿನ ವಾಡಿಕೆ ಪ್ರಮಾಣದ ಬಹುಪಾಲು ಮಳೆ ಇದೇ ತಿಂಗಳಲ್ಲಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ ಆತಂಕವೊಂದು ಮನೆಮಾಡಿದೆ. ಮುಂಗಾರಿನ ಮುನ್ಸೂಚನೆಯ ಮೇಲೆ ಹಲವು ಆರ್ಥಿಕ ಚಟುವಟಿಕೆಗಳ ಭವಿಷ್ಯ ನಿಂತಿರುವುದರಿಂದ ಅದಕ್ಕೆ ವಿಶೇಷ ಮಹತ್ವವಿದೆ. ಮಳೆಯ ಮುನ್ಸೂಚನೆಗೆ ಬಳಕೆಯಾಗುತ್ತಿರುವ ತಂತ್ರಜ್ಞಾನ ನಿರಂತರವಾಗಿ ಸುಧಾರಣೆ ಆಗುತ್ತಿದ್ದರೂ ಹವಾಮಾನ ಇಲಾಖೆಯು ಕೊಡುವ ಸೂಚನೆಗಳು ಶೇಕಡ ನೂರರಷ್ಟು ನಿಖರವಾಗಿಲ್ಲ. ಕೆಲವೊಮ್ಮೆ ವಾತಾವರಣ ಕೊಡುವ 'ಸೂಚನೆ'ಯನ್ನು ಗ್ರಹಿಸಲು ಕೂಡ ಅದಕ್ಕೆ ಸಾಧ್ಯವಾಗಿಲ್ಲ. ಇಲಾಖೆಯು ದೀರ್ಘಾವಧಿ, ವಿಸ್ತರಿತ ಅವಧಿ, ಅಲ್ಪಾವಧಿ ಮತ್ತು ಅಲ್ಪ-ಮಧ್ಯಮಾವಧಿ ಮುನ್ಸೂಚನೆಯನ್ನು ನೀಡುತ್ತದೆ. ದೀರ್ಘಾವಧಿಯ ನಿಖರತೆ ಉತ್ತಮವಾಗಿದ್ದರೂ ವಿಸ್ತರಿತ ಅವಧಿಯ ಮುನ್ಸೂಚನೆ ಸಮಸ್ಯಾತ್ಮಕ. ಈ ಅವಧಿಯ ಮುನ್ಸೂಚನೆಯೇ ಕೃಷಿಕರಿಗೆ ಅಗತ್ಯವಾಗಿ ಬೇಕಿರುವುದರಿಂದ, ಅದರಲ್ಲಿನ ದೋಷವು ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಳೆ ಮುನ್ಸೂಚನೆಯ ಲೆಕ್ಕಾಚಾರವೆಲ್ಲ ತಪ್ಪಿದ್ದರಿಂದ ಮಧ್ಯಪ್ರದೇಶದ ಕೃಷಿಕರು ಕಳೆದ ವರ್ಷ ತೀವ್ರ ನಷ್ಟ ಅನುಭವಿಸಿರುವುದು ಇದಕ್ಕೊಂದು ನಿದರ್ಶನ. ಅಲ್ಲಿನ ಕಿಸಾನ್‌ ಸಂಘವು ಹವಾಮಾನ ಇಲಾಖೆಯ ವಿರುದ್ಧವೇ ಮೊಕದ್ದಮೆಯನ್ನು ಹೂಡಿದೆ! ಜಾಗತಿಕ ತಾಪಮಾನ ಬದಲಾವಣೆ ಯಿಂದಾಗಿ ಹವಾಮಾನದ 'ತೀವ್ರ ವೈಪರೀತ್ಯ' ವಿದ್ಯಮಾನಗಳ ಸಂಖ್ಯೆ ಏರುತ್ತಿದ್ದು, ಮುನ್ಸೂಚನೆಯ ನಿಖರತೆ ಮೇಲೂ ಅದು ಪ್ರಭಾವ ಬೀರುತ್ತಿದೆ ಎಂದು ತಜ್ಞರು ಹೇಳುತ್ತಾರೆ.

                ಹವಾಮಾನ ಇಲಾಖೆ ಮುನ್ಸೂಚನೆಯ ನಿಖರತೆ ಕುರಿತು ಪ್ರಶ್ನೆಗಳಿದ್ದರೂ ವಾಡಿಕೆ ಮಳೆಯ ಆಶಾಭಾವ ವ್ಯಕ್ತವಾಗಿರುವುದರಿಂದ ಸರ್ಕಾರ ಈಗಿನಿಂದಲೇ ಮಳೆಗಾಲಕ್ಕೆ ಅಗತ್ಯವಾದ ಸಿದ್ಧತೆಯನ್ನು ಆರಂಭಿಸಬೇಕು. ರಾಜ್ಯದ ಎಲ್ಲ ಕಡೆಗಳಲ್ಲಿ ಬೀಜ ಮತ್ತು ಗೊಬ್ಬರದ ದಾಸ್ತಾನು ಅಗತ್ಯ ಪ್ರಮಾಣದಲ್ಲಿ ಇರುವಂತೆಯೂ ನೋಡಿಕೊಳ್ಳಬೇಕು. ಮುನ್ಸೂಚನೆಯ ಜಿಲ್ಲಾವಾರು ವಿವರಗಳನ್ನು ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆಯೊಂದನ್ನು ಹಾಕಿಕೊಂಡು ಕಾರ್ಯಪ್ರವೃತ್ತವಾಗಬೇಕು. ಜುಲೈನಲ್ಲಿ ಹೇರಳವಾಗಿ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಕೆರೆ-ಕಟ್ಟೆಗಳ ಹೂಳನ್ನು ಈಗಲೇ ತೆಗೆಯಿಸಿ, ಒಡ್ಡುಗಳನ್ನು ಸದೃಢಗೊಳಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವ ಮೂಲಕ ಮಳೆ ನೀರು ಸಂಗ್ರಹಕ್ಕೆ ಅವಕಾಶ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಮಾಡಿಕೊಳ್ಳುವ ಇಂತಹ ಸಣ್ಣ ತಯಾರಿಗಳು ಮಳೆಗಾಲದ ಪ್ರವಾಹದ ಸಂಕಷ್ಟವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ. ಅಲ್ಲದೆ, ನೀರಿನ ಸಂಗ್ರಹಕ್ಕೆ ದಾರಿ ಮಾಡಿಕೊಡುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಅಭಾವದ ಆತಂಕವನ್ನೂ ದೂರ ಮಾಡುತ್ತವೆ. ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಲು ಪ್ರತಿಸಲ ಎಡವುತ್ತಿರುವುದರಿಂದಲೇ ಮಹಾಪೂರದ ಬಿಸಿಯನ್ನು ನಾವು ಪದೇಪದೇ ಅನುಭವಿಸಬೇಕಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries