ನವದೆಹಲಿ: ಭಾರತೀಯ ವಿದೇಶಾಂಗ ಸೇವೆ ಸಂಪೂರ್ಣ ಬದಲಾಗಿದೆ. ಅವರು ದುರಹಂಕಾರಿಗಳು ಎಂದು ಯುರೋಪಿನ ಅಧಿಕಾರಿಗಳು ಹೇಳಿದ್ದರೆಂದು ಲಂಡನ್ ನ 'ಐಡಿಯಾಸ್ ಫಾರ್ ಇಂಡಿಯಾ' ಸಮಾವೇಶದಲ್ಲಿ ಹೇಳಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ವಿದೇಶಾಂಗ ಸಚಿವ ಜೈ ಶಂಕರ್ ತಿರುಗೇಟು ನೀಡಿದ್ದಾರೆ.
ಹೌದು ನೀವು ಹೇಳಿದಂತೆ ಭಾರತೀಯ ವಿದೇಶಾಂಗ ನೀತಿಗಳು ಬದಲಾಗಿವೆ. ಆದರೆ, ಅದನ್ನು ನೀವು ಹೇಳಿದಂತೆ ದುರಹಂಕಾರಿ ಎನ್ನಲಾಗದು, ಅದು ವಿಶ್ವಾಸ ಎಂದು ಎಸ್. ಜೈ ಶಂಕರ್ ಹೇಳುವುದರೊಂದಿಗೆ ರಾಹುಲ್ ಗಾಂಧಿ ಅವರ ಆರೋಪವನ್ನು ಕಟುವಾಗಿ ಟೀಕಿಸಿದ್ದಾರೆ.
'ನಾನು ಯುರೋಪಿನ ಕೆಲವು ಅಧಿಕಾರಿಗಳೊಂದಿಗೆ ಮಾತನಾಡುತ್ತಿದೆ. ಅವರು ಭಾರತೀಯ ವಿದೇಶಾಂಗ ಸೇವೆ ಸಂಪೂರ್ಣವಾಗಿ ಬದಲಾಗಿದೆ ಎಂದು ಅವರು ಹೇಳುತ್ತಿದ್ದರು. ಅವರು ಏನನ್ನೂ ಕೇಳುವುದಿಲ್ಲ. ಅವರು ದುರಹಂಕಾರಿಗಳು. ಅವರು ಏನು ಆದೇಶಗಳನ್ನು ಪಡೆಯುತ್ತಾರೋ ಅದನ್ನು ನಮಗೆ ಹೇಳುತ್ತಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಲಂಡನ್ ನಲ್ಲಿ ನಡೆದ ಐಡಿಯಾಸ್ ಫಾರ್ ಇಂಡಿಯಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಆರೋಪಿಸಿದರು.
ರಾಹುಲ್ ಗಾಂಧಿ ಹೇಳಿಕೆಯ 19 ಸೆಕೆಂಡ್ ಗಳ ವಿಡಿಯೋ ಕ್ಲಿಪ್ ನೊಂದಿಗೆ ಟ್ವೀಟ್ ಮಾಡಿರುವ ಎಸ್. ಜೈಶಂಕರ್, ಹೌದು ಭಾರತೀಯ ವಿದೇಶಾಂಗ ಸೇವೆ ಬದಲಾಗಿದೆ. ಅವರು ಸರ್ಕಾರದ ಆದೇಶಗಳನ್ನು ಅನುಸರಿಸುತ್ತಾರೆ. ಹೌದು, ಅವರು ಇತರರ ವಾದಗಳನ್ನು ವಿರೋಧಿಸುತ್ತಾರೆ. ಇಲ್ಲ, ಅದನ್ನು ದುರಹಂಕಾರ ಎಂದು ಕರೆಯುವುದಿಲ್ಲ. ಅದನ್ನು ವಿಶ್ವಾಸ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸುವುದು ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.