ಕಾಸರಗೋಡು: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ವಿವಿಧ ತೀರ್ಪುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಚಿಸಲಾದ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯನ್ನು ಸಂಪೂರ್ಣ ತ್ಯಾಜ್ಯ ಮುಕ್ತವನ್ನಾಗಿಸಲು ಜಿಲ್ಲೆಯಲ್ಲಿ 41 ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಕ್ರಿಯಾ ಯೋಜನೆ ರಚಿಸಲು ಸಭೆಯಲ್ಲಿ ತೀರ್ಮಾಣಿಸಲಾಯಿತು. ಜಿಲ್ಲೆಯ ಎಲ್ಲಾ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಅಜೈವಿಕ ತ್ಯಾಜ್ಯವನ್ನು ಹಸಿರು ಕ್ರಿಯಾ ಸೇನೆಗೆ ಹಸ್ತಾಂತರಿಸಬೇಕು. ಸರ್ಕಾರದ ಆದೇಶದಂತೆ ಮಾಸಿಕ 100 ರೂ.ನ ಕಾನೂನುಬದ್ಧ ಬಳಕೆದಾರರ ಶುಲ್ಕವನ್ನು ಪಾವತಿಸದ ವಾಣಿಜ್ಯ ಸಂಸ್ಥೆಗಳ ವಿರುದ್ಧ ಹಸಿರು ಕಿಯಾ ಸೇನೆ ಕ್ರಮ ಕೈಗೊಳ್ಳಲಿದ್ದು, ಸಂಸ್ಥೆಯ ಪರವಾನಗಿ ರದ್ದುಪಡಿಸಲು ಕ್ರಮಕೈಗೊಳ್ಳಲಾಗುವುದ. ಜಿಲ್ಲೆಯ ಎಲ್ಲ ಮನೆಗಳೂ ಹಸಿರು ಕ್ರಿಯಾ ಸೇನೆಯ ಮೂಲಕ ಅಜೈವಿಕ ತ್ಯಾಜ್ಯವನ್ನು ತೊಡೆದು ಹಾಕಬೇಕು ಮತ್ತು ಹಸಿರು ಕ್ರಿಯಾ ಸೇನೆಗೆ ಬಳಕೆದಾರರ ಶುಲ್ಕವಾಗಿ 50 ರೂ. ನೀಡಬೇಕು. ಐಷಾರಾಮಿ ತೆರಿಗೆ ಪಾವತಿದಾರರು ಬಳಕೆದಾರರ ಶುಲ್ಕ ಪಾವತಿಸದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಯುವುದು ಅಥವಾ ತ್ಯಾಜ್ಯ ಸುಟ್ಟುಹಾಕಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿದಲ್ಲಿ 500 ರೂ.ಗಿಂತ ಕಡಿಮೆಯಿಲ್ಲದೆ, 2ಸಾವಿರ ರಊ.ವ ರೆಗೂ ದಂಡ ವಿಧಿಸಲಾಗುವುದು. ಜಲಮೂಲಗಳಲ್ಲಿ ತ್ಯಾಜ್ಯ ಸುರಿದರೆ ಕನಿಷ್ಠ ಹತ್ತು ಸಾವಿರದಿಂದ 25ಸಾವಿರ ರೂ. ದಂಡ ಹಾಗೂ ಆರು ತಿಂಗಳಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

