HEALTH TIPS

'ರಾಕೆಟ್ರಿ: ದಿ ನಂಬಿ ಎಫೆಕ್ಟ್‌' ಚಿತ್ರದಲ್ಲಿ ಹಲವು ಸುಳ್ಳು: ಇಸ್ರೊ ವಿಜ್ಞಾನಿಗಳು

 

                ತಿರುವನಂತಪುರ: ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನಾಧರಿತ 'ರಾಕೆಟ್ರಿ: ದಿ ನಂಬಿ ಎಫೆಕ್ಟ್‌' ಸಿನಿಮಾದಲ್ಲಿ ಹಾಗೂ ಕೆಲವು ಟಿ.ವಿ ವಾಹಿನಿಗಳಲ್ಲಿ ಸಾಕಷ್ಟು ಸುಳ್ಳುಗಳನ್ನು ತೋರಿಸಿ ದೇಶದ ಬಾಹ್ಯಾಕಾಶ ಸಂಸ್ಥೆಯ ಖ್ಯಾತಿಗೆ ಕಳಂಕ ಹಚ್ಚಲಾಗಿದೆ ಎಂದು ಇಸ್ರೊ ಮಾಜಿ ವಿಜ್ಞಾನಿಗಳ ಗುಂಪೊಂದು ಬುಧವಾರ ಆರೋಪಿಸಿದೆ.

                  ಇಸ್ರೊ ಎಲ್‌ಪಿಎಸ್‌ಇ ನಿರ್ದೇಶಕ ಡಾ.ಎ.ಇ. ಮುತುನಾಯಗಂ, ಕ್ರಯೋಜೆನಿಕ್‌ ಎಂಜಿನ್‌ ಯೋಜನಾ ನಿರ್ದೇಶಕ ಪ್ರೊಫೆಸರ್‌ ಇ.ವಿ.ಎಸ್‌. ನಂಬೂದಿರಿ, ಉಪ ನಿರ್ದೇಶಕ ಡಿ.ಸಸಿಕುಮಾರನ್‌ ಹಾಗೂ ಇಸ್ರೊದ ಇತರ ಮಾಜಿ ವಿಜ್ಞಾನಿಗಳು ಬುಧವಾರ ಮಾಧ್ಯಮಗೋಷ್ಠಿ ನಡೆಸಿ, ಈ ಸಿನಿಮಾದಲ್ಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

                  ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನ ಆಧರಿತ ಈ ಚಿತ್ರದ ಕಥೆಯನ್ನು ಎಣೆದಿರುವ ನಟ ಆರ್‌.ಮಾಧವನ್‌ ಅವರು, ಚಿತ್ರ ನಿರ್ಮಾಣ ಹಾಗೂ ನಿರ್ದೇಶನದ ಜತೆಗೆ ಪ್ರಧಾನ ಪಾತ್ರದಲ್ಲಿಯೂ ನಟಿಸಿದ್ದಾರೆ.

                     'ಚಿತ್ರದಲ್ಲಿ ಮತ್ತು ಟಿ.ವಿ ವಾಹಿನಿಗಳಲ್ಲಿ ಹೇಳಿರುವಂತೆ ನಂಬಿ ನಾರಾಯಣ್‌ ಅನೇಕ ಯೋಜನೆಗಳ ಪಿತಾಮಹಾ ಎನ್ನುವುದು ಸುಳ್ಳು. ನಂಬಿ ನಾರಾಯಣ್‌ ಸಿನಿಮಾ ಮತ್ತು ಟಿ.ವಿ ವಾಹಿನಿಗಳ ಮೂಲಕ ಇಸ್ರೊ ಮತ್ತು ಇತರ ವಿಜ್ಞಾನಿಗಳಿಗೆ ಕುಖ್ಯಾತಿ ಅಂಟಿಸುತ್ತಿದ್ದು, ಸಾರ್ವಜನಿಕರಿಗೆ ವಾಸ್ತವ ತಿಳಿಸಬೇಕು' ಎಂದು ವಿಜ್ಞಾನಿಗಳು ಒತ್ತಾಯಿಸಿದ್ದಾರೆ.

                    'ಕ್ರಯೋಜೆನಿಕ್ ತಂತ್ರಜ್ಞಾನವನ್ನು ಇಸ್ರೊ ಹೊಂದುವಲ್ಲಿ ಆದ ವಿಳಂಬವೇ ತಮ್ಮ ಬಂಧನಕ್ಕೆ ಕಾರಣವೆಂದು ನಾರಾಯಣನ್ ಸಿನಿಮಾದಲ್ಲಿ ಹೇಳಿರುವುದು ವಾಸ್ತವಕ್ಕೆ ದೂರವಾದುದು. 1980ರಲ್ಲಿ ಇಸ್ರೊ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಿತು. ಆಗ ಉಸ್ತುವಾರಿ ಇದ್ದವರು ಇ.ವಿ.ಎಸ್. ನಂಬೂದಿರಿ. ಈ ಯೋಜನೆಗೂ ನಾರಾಯಣನ್ ಅವರಿಗೂ ಸಂಬಂಧವೇ ಇಲ್ಲ. ‌ಸಿನಿಮಾದಲ್ಲಿ ಇಸ್ರೊಗೆ ಸಂಬಂಧಿಸಿ ಉಲ್ಲೇಖಿಸಿರುವ ವಿಷಯಗಳಲ್ಲಿ ಶೇ 90ರಷ್ಟು ಸುಳ್ಳುಗಳಿವೆ' ಎಂದು ವಿಜ್ಞಾನಿಗಳ ಗುಂಪು ಹೇಳಿದೆ.

                  'ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ತಾವೇ ತಿದ್ದಿದ್ದಕ್ಕೆ ಅವರು ಮುಂದೆ ರಾಷ್ಟ್ರಪತಿಯಾದರೆಂದು ನಂಬಿ ನಾರಾಯಣ್‌ ಸಿನಿಮಾದಲ್ಲಿ ಹೇಳಿಕೊಳ್ಳುತ್ತಾರೆ. ಆದರೆ, ಇದು ಕೂಡ ಸುಳ್ಳು. ಚಿತ್ರದಲ್ಲಿರುವ ಸುಳ್ಳು ಆರೋಪಗಳ ಬಗ್ಗೆ ಕ್ರಮ ವಹಿಸಲು ಈಗಿನ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ ಅವರಿಗೆ ಮನವಿ ಮಾಡಲಾಗಿದೆ' ಎಂದು ಅವರು ಹೇಳಿದ್ದಾರೆ.

                  ಇಬ್ಬರು ವಿಜ್ಞಾನಿಗಳು ಮತ್ತು ಮಾಲ್ಡೀವ್ಸ್‌ನ ಇಬ್ಬರು ಮಹಿಳೆಯರ ಮೂಲಕ ದೇಶದ ಬಾಹ್ಯಾಕಾಶ ಕಾರ್ಯಕ್ರಮಗಳ ಅಮೂಲ್ಯ ಮಾಹಿತಿ ವಿದೇಶಗಳಿಗೆ ವರ್ಗಾಯಿಸಲಾಗಿದೆ ಎನ್ನುವ ಆರೋಪಗಳ ಕುರಿತ ಇಸ್ರೊ ಬೇಹುಗಾರಿಕೆ ಪ್ರಕರಣವನ್ನು 1994ರಲ್ಲಿ ಮೊದಲು ಪೊಲೀಸರು ದಾಖಲಿಸಿ, ನಂತರ ಸಿಬಿಐಗೆ ವರ್ಗಾಯಿಸಲಾಗಿತ್ತು. ಇದರಲ್ಲಿ ಆರೋಪಿಯಾಗಿದ್ದ 76 ವರ್ಷದ ನಂಬಿ ನಾರಾಯಣ್‌ ಅವರ ಬಂಧನವೂ ಆಗಿತ್ತು. ಇವರು ಎರಡು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು. ಇಸ್ರೊ ಬೇಹುಗಾರಿಕೆ ಪ್ರಕರಣದಲ್ಲಿ ಕೇರಳ ಪೊಲೀಸರ ಪಾತ್ರದ ಬಗ್ಗೆ 2018ರಲ್ಲಿ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಬೇಹುಗಾರಿಕೆ ಪ್ರಕರಣ ಸುಳ್ಳು ಎಂದು ಸಿಬಿಐ ವರದಿ ನೀಡಿತು.

             ವಿಜ್ಞಾನಿಗಳ ಈ ಆರೋಪಗಳ ಬಗ್ಗೆ ನಂಬಿ ನಾರಾಯಣನ್ ಮತ್ತು ಚಿತ್ರದ ನಿರ್ಮಾಪಕರು ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries