ತಿರುವನಂತಪುರ : ಕಳೆದ ವರ್ಷ ಕೇರಳದ ರಾಜಕೀಯದಲ್ಲಿ ಭಾರಿ ಸುದ್ದಿಯಾಗಿದ್ದ ಪ್ರಕರಣಗಳಲ್ಲಿ ಒಂದು ಕೇರಳದ ಮಾಜಿ ಸಚಿವ ಹಾಗೂ ರಾಜ್ಯ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಡಿಯೇರಿ ಬಾಲಕೃಷ್ಣನ್ ಅವರ ರಾಜೀನಾಮೆ ಪ್ರಹಸನ.
ಕೇರಳದ ಅತ್ಯಂತ ಪ್ರಭಾವಶಾಲಿ ಕಮ್ಯೂನಿಸ್ಟ್ ಮುಖಂಡರಲ್ಲೊಬ್ಬರೆನಿಸಿರುವ ಕೋಡಿಯೇರಿ ಬಾಲಕೃಷ್ಣನ್ ಅವರ ಒಬ್ಬ ಮಗ ಬಿನೀಶ್ ಬೆಂಗಳೂರಿನಲ್ಲಿ ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದರೆ, ಇನ್ನೊಬ್ಬ ಪುತ್ರ ಬಿನೋಯ್ ಬಾಲಕೃಷ್ಣನ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು. ಮುಂಬೈನ ಬಾರ್ ಡಾನ್ಸರ್ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದ ಇವರ ಮೇಲಿತ್ತು. ಮಕ್ಕಳ ಈ ಕೃತ್ಯದಿಂದಾಗಿ ತೀವ್ರ ಟೀಕೆಗೆ ಒಳಗಾಗಿದ್ದ ಕೋಡಿಯೇರಿ ಬಾಲಕೃಷ್ಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ್ದು, ಬಹಳ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಸುದ್ದಿಯಲ್ಲಿರುವುದು ಇದೇ ಬಿನೋಯ್ ಬಾಲಕೃಷ್ಣನ್ ಅವರ ರೇಪ್ ಕೇಸ್. ಮದುವೆಯಾಗುತ್ತೇನೆಂದು ಭರವಸೆ ನೀಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಗರ್ಭವತಿ ಮಾಡಿ ವಂಚಿಸಿದನೆಂದು ಮಹಿಳೆ ಆರೋಪಿಸಿದ್ದರು. ಈ ವಿಷಯ ಮುಂಬೈ ಕೋರ್ಟ್ ಮೆಟ್ಟಿಲೇರಿತ್ತು. '2008ರಲ್ಲಿ ದುಬೈನ್ ಡಾನ್ಸ್ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ನಾವಿಬ್ಬರೂ ಆಪ್ತರಾಗಿದ್ದೆವು. 2015ರವರೆಗೂ ದೈಹಿಕ ಸಂಬಂಧ ಬೆಳೆಸಿದ್ದೆವು. ಮದುವೆಯಾಗುವುದಾಗಿ ಆತ ನಂಬಿಸಿದ್ದ ಹಿನ್ನೆಲೆಯಲ್ಲಿ ನಾನು ಎಲ್ಲವನ್ನೂ ಒಪ್ಪಿಸಿದ್ದೆ. ನಂತರ ಗರ್ಭವತಿಯಾದ ಮೇಲೆ ಆತ ಮೋಸ ಮಾಡಿದ್ದಾನೆ' ಎಂದು ಮಹಿಳೆ ದೂರಿದ್ದರು. ಈ ಸಂಬಂಧದಿಂದ ಹುಟ್ಟಿದೆ ಎನ್ನಲಾದ ಗಂಡು ಮಗುವಿನ ಅಪ್ಪನ ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಆದರೆ ವಿಚಿತ್ರ ಎಂದರೆ ಪರೀಕ್ಷೆ ನಡೆದು ಮೂರು ವರ್ಷವಾದರೂ ಇನ್ನೂ ವರದಿ ಬಂದಿಲ್ಲ!
ಅದೇನೆ ಇರಲಿ, ಇದೀಗ ಈ ರೇಪ್ ಕೇಸ್ ಸುಖಾಂತ್ಯಗೊಂಡಿದೆ. ಅತ್ಯಾಚಾರದ ಆರೋಪ ಮಾಡಿದ್ದ ಮಹಿಳೆಗೆ ಬಿನೋಯ್ 80 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಈ ಮೂಲಕ ರೇಪ್ ಕೇಸ್ನಿಂದ ಕೈತೊಳೆದುಕೊಂಡಿದ್ದಾರೆ. ಎರಡೂ ಕಡೆಯವರು ರಾಜಿಯಾಗಿದ್ದನ್ನು ಪರಿಗಣಿಸಿದ ಕೋರ್ಟ್, ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಸದ್ಯ ಬಿನೋಯ್ ಅವರಿಗೆ ಹುಟ್ಟಿದೆ ಎನ್ನಲಾದ ಗಂಡುಮಗು ಅಮ್ಮನ ಬಳಿ ಇದೆ. ಮಗುವಿನ ಪಾಲನೆಗೂ ಬಿನೋಯ್ ದುಡ್ಡು ಕಳುಹಿಸುತ್ತಿರುವುದಾಗಿ ಮಹಿಳೆ ಹೇಳಿದ್ದಾರೆ.





