ನವದೆಹಲಿ: ಮಿಲಿಯನ್ಗಟ್ಟಲೇ ಸಬ್ಸ್ಕ್ರೈಬರ್ಸ್ ಹೊಂದಿದ್ದ ಮಧ್ಯಪ್ರದೇಶದ ಪ್ರಖ್ಯಾತ ಯೂಟ್ಯೂಬರ್ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೃತ ಯೂಟ್ಯೂಬರ್ನನ್ನು ಅಭ್ಯುದಯ್ ಮಿಶ್ರಾ ಎಂದು ಗುರುತಿಸಲಾಗಿದೆ.
ಈತ ಓರ್ವ ಗೇಮಿಂಗ್ ಯೂಟ್ಯೂಬರ್ ಆಗಿದ್ದ. ಗರೇನಾ ಫ್ರೀ ಫೈರ್ ಮತ್ತು ಪಬ್ಜಿಗೆ ಸಂಬಂಧಿಸಿದ ವಿಡಿಯೋ ಮೂಲಕವೇ ಮಿಶ್ರಾ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸ್ಕೈಲಾರ್ಡ್ ಹೆಸರಿನಿಂದಲೇ ತುಂಬಾ ಫೇಮಸ್ ಆಗಿದ್ದರು. ಇನ್ಸ್ಟಾಗ್ರಾಂನಲ್ಲಿ ಮಿಶ್ರಾ ಅವರು ಮಾಡಿದ್ದ ಪೋಸ್ಟ್ ಅನ್ನು 4.24 ಲಕ್ಷ ಮಂದಿ ವೀಕ್ಷಿಸಿದ್ದರು. ಇನ್ಸ್ಟಾಗ್ರಾಂನಲ್ಲಿ ತಮ್ಮ ಸೆಲ್ಫಿ ಫೋಟೋ ಹಾಕಿ, ಮಧ್ಯಪ್ರದೇಶ, ವಿಸ್ಮಯಕಾರಿ ಭಾರತದ ಹೃದಯ ಎಂದು ಅಡಿಬರಹ ನೀಡಿದ್ದರು. ಮಿಶ್ರಾ ಅವರು ತಮ್ಮ ಯೂಟ್ಯೂಬ್ನಲ್ಲಿ ಎರಡು ವಾರಗಳ ಹಿಂದಷ್ಟೇ ವಿಡಿಯೋ ಪೋಸ್ಟ್ ಮಾಡಿದ್ದರು. ಯೂಟ್ಯೂಬ್ನಲ್ಲಿ 1.64 ಮಿಲಿಯನ್ ಸಬ್ಸ್ಕ್ರೈಬರ್ಸ್ ಹೊಂದಿದ್ದರು.
ಕಳೆದ ಭಾನುವಾರ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಿಂದ 122 ಕಿಮೀ ದೂರದಲ್ಲಿರುವ ಸೊಹಾಗ್‌ಪುರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಮಿಶ್ರಾ ಅವರು ತಮ್ಮ ಸ್ನೇಹಿತರ ಗುಂಪಿನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಟ್ರಕ್ ಒಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಿಶ್ರಾ ಮತ್ತು ಅವರ ಸ್ನೇಹಿತರು, ಮಧ್ಯಪ್ರದೇಶ ಸರ್ಕಾರದಿಂದ ಪ್ರಾಯೋಜಿಸಲ್ಪಟ್ಟ ಪ್ರವಾಸೋದ್ಯಮವನ್ನು ಉತ್ತೇಜಿತ ರಾಜ್ಯ ಬೈಕ್ ಸವಾರಿ ಪ್ರವಾಸದಲ್ಲಿದ್ದರು. ಪ್ರವಾಸವು ಸೆಪ್ಟೆಂಬರ್ 21 ರಂದು ಖಜುರಾಹೋದಲ್ಲಿ ಪ್ರಾರಂಭವಾಗಿತ್ತು. ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಿಶ್ರಾ ದುರಂತ ಸಾವಿಗೀಡಾಗಿದ್ದಾರೆ. ಅವರ ಅಭಿಮಾನಿಗಳು ತ್ತು ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಅಗಲಿದ ಸ್ನೇಹಿತನಿಗೆ ಸಂತಾಪವನ್ನು ಸೂಚಿಸುತ್ತಿದ್ದಾರೆ.
ಟ್ರಕ್ ಚಾಲಕನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ಚಾಲಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.





