ಕಾಸರಗೋಡು: ಆನೆದಂತ ಸಾಗಾಟದ ಬಗ್ಗೆ ಗುಪ್ತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆನೆದಂತ ಬದಲು ಭಾರಿ ಪ್ರಮಾಣದ ಅಮಾಣ್ಯ ನೋಟುಗಳು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪಾಲಕುನ್ನು ತೆಕ್ಕೇಕರ ನಿವಾಸಿ ನಾರಾಯಣನ್ ಎಂಬಾತನನ್ನು ಬಂಧಿಸಲಾಗಿದೆ. ಈತನ ವಶದಲ್ಲಿದ್ದ 1ಸಾವಿರ ರೂ. ಮುಖಬೆಲೆಯ 88ನೋಟು ಹಾಗೂ 500ರೂ. ಮುಖಬೆಲೆಯ 82ನಿಷೇಧಿತ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1.29ಲಕ್ಷ ರೂ ನಗದು ವಶಪಡಿಸಿಕೊಳ್ಳಲಾಗಿದೆ. ಹಣ ಸಾಗಿಸುತ್ತಿದ್ದ ಮಾರುತಿ ಆಲ್ಟೊ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ.
ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಕುನ್ನು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ನಿಷೇಧಿತ ನೋಟುಗಳನ್ನು ಆರೋಪಿ ಶ್ರೀಲಂಕಾ ಹಾಗೂ ನೇಪಾಳಕ್ಕೆ ರವಾನಿಸುವ ಯತ್ನದಲ್ಲಿದ್ದನು. ಕರೆನ್ಸಿ ನೋಟುಗಳ ಕಟ್ಟನ್ನು ಪೂಜಾಕೊಠಡಿಯಲ್ಲಿಟ್ಟಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ಅಂಧವಿಶ್ವಾಸವನ್ನು ಜನರಲ್ಲಿ ತುಂಬಿಸಿ, ಈ ಮೂಲಕ ಹಣ ಗಳಿಕೆಗೆ ಯತ್ನಿಸಿದ್ದನೆಂದೂ ಶಂಕಿಸಲಾಗಿದೆ.
ಕಣ್ಣೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ರಾಜನ್, ಕಣ್ಣೂರು ಸಾಮಾಜಿಕ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ರಾಜೀವನ್, ವಲಯ ಅರಣ್ಯಾಧಿಕಾರಿಗಳಾದ ವಿ.ರತೀಸನ್, ಎ.ಪಿ.ಶ್ರೀಜಿತ್, ಕೆ.ರಾಜೀವನ್, ಕೆ.ಇ.ಬಿಜುಮೋನ್, ಉಪ ಅರಣ್ಯಾಧಿಕಾರಿ ಕೆ.ಚಂದ್ರನ್, ವಲಯ ಅರಣ್ಯಾಧಿಕಾರಿಗಳಾದ ಸುರೇಂದ್ರನ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಕರಣವನ್ನು ಮೇಲ್ಪರಂಬ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಆನೆದಂತಕ್ಕಾಗಿ ಕಾರ್ಯಾಚರಣೆ, ಸಿಕ್ಕಿದ್ದು 1.29ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳು-ಆರೋಪಿ ಬಂಧನ
0
ಜನವರಿ 19, 2023

