ಕಾಸರಗೋಡು: ಅದೃಷ್ಟಚೀಟಿ ಯೋಜನೆ ಮೂಲಕ ಚಿನ್ನ ಬಹುಮಾನದ ಭರವಸೆಯೊಡ್ಡಿ ಹಲವರಿಂದ ಹಣ ಸಂಗ್ರಹಿಸಿದ ತಂಡ ಯೋಜನೆ ಕಾಲಾವಧಿ ಕಳೆಯುತ್ತಿದ್ದಂತೆ ಪರಾರಿಯಾಗಿದ್ದು, ಇವರ ಮೊಬೈಲು ಸ್ವಿಚ್ ಆಫ್ ಆಗಿದೆ.
ಉಪ್ಪಳ ಮಣಿಮುಂಡ ಟವರ್ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿದ್ದ ನಾಲ್ಕು ಮಂದಿಯ ತಂಡ ಅದೃಷ್ಟಚೀಟಿ ಯೋಜನೆಯ ಕಾರ್ಡು ನೀಡಿ ಹದಿನೈದು ದಿವಸಗಳಿಗೆ ಒಂದುಬಾರಿ 200ರೂ. ಪಾವತಿಸುವಂತೆ ತಿಳಿಸಿದ್ದು, ಪ್ರತಿ 15ದಿವಸಕ್ಕೆ ಒಂದು ಬಾರಿ ಡ್ರಾ ನಡೆಸಿ ಚಿನ್ನದ ನಾಣ್ಯ ಬಹುಮಾನವಾಗಿ ನೀಡುವುದು ಹಾಗೂ 12ತಿಂಗಳ ಕಾಲ ಕಂತು ಕಟ್ಟಿದವರ ಹೆಸರು ಸೇರಿಸಿ ಡ್ರಾ ನಡೆಸುವ ಮೂಲಕ ಬಂಪರ್ ಬಹುಮಾನ ನೀಡುವುದಾಗಿಯೂ ಭರವಸೆ ನೀಡಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ವಾಟ್ಸಪ್ ಗ್ರೂಪನ್ನೂ ಮಾಡಿಕೊಂಡು, ಇದರಲ್ಲಿ ಚಿನ್ನದ ನಾಣ್ಯಪಡೆದವರ ಫೋಟೋ ಅಪ್‍ಲೋಡ್ ಮಾಡಿ, ಜನರಲ್ಲಿ ಭರವಸೆ ಮೂಡಿಸುವ ಕೆಲಸವನ್ನೂ ನಡೆಸುತ್ತಿದ್ದರು. 12ತಿಂಗಳು ಕಳೆಯುತ್ತಿದ್ದಂತೆ ತಂಡ ನೀಡಿದ ಮೊಬೈಲ್ ನಂಬರ್ ಸ್ವಿಚ್‍ಆಫ್ ಆಗಿದ್ದು, ವಾಟ್ಸಪ್ ಗ್ರೂಪ್ ನಿಷ್ಕ್ರಿಯಗೊಂಡಿದೆ. ಬಂಪರ್ ಬಹುಮಾನದ ನಿರೀಕ್ಷೆಯಲ್ಲಿದ್ದ ಗ್ರಾಹಕರು ಹಿಡಿಶಾಪ ಹಾಕಲಾರಂಭಿಸಿದ್ದಾರೆ. ಹೆಚ್ಚಿನ ಗ್ರಾಹಕರು ಮಹಿಳೆಯರಾಗಿದ್ದಾರೆ ಎಂಬ ಮಾಹಿತಿಯಿದೆ. ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ.
ಉಪ್ಪಳದಲ್ಲಿ ಚಿನ್ನ ಬಹುಮಾನದ ಅದೃಷ್ಟಚೀಟಿ ಯೋಜನೆ ಹೆಸರಲ್ಲಿ ವಂಚನೆ
0
ಜನವರಿ 19, 2023


