ಕಾಸರಗೋಡು: ತೆಂಕುತಿಟ್ಟಿನ ಬಹುತೇಕ ಕಲಾವಿದರೆಲ್ಲರೂ ಒಂದೇ ವೇದಿಕೆಯಡಿ ಪ್ರಸ್ತುಪಡಿಸಲಿರುವ ವಿಶಿಷ್ಟ ಕಾರ್ಯಕ್ರಮ'ಕಾಸರಗೋಡು ಯಕ್ಷಗಾಯನ-ವಚನೋತ್ಸವ'ಕಾರ್ಯಕ್ರಮ ಜ. 20ರಂದು ಬೆಳಗ್ಗೆ 9.30ರಿಂದ ಕಾಸರಗೋಡು ತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್‍ನ ಮಥುರಾ ಸಭಾಂಗಣದಲ್ಲಿ ಜರುಗಲಿದೆ.
ಗಡಿನಾಡು ಕಾಸರಗೋಡು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಯಕ್ಷಗಾನ ಕ್ಷೇತ್ರದ ದಿಗ್ಗಜರೆಲ್ಲರೂ ದಿನ ಪೂರ್ತಿ ನಡೆಸುವ ಕಾರ್ಯಕ್ರಮ ಇದಾಗಿದೆ. ಕೊಡುಗೈದಾನಿ, ಕಲಾಪೋಷಕ, ಹೋಟೆಲ್ ಉದ್ಯಮಿ ರಾಮ ಪ್ರಸಾದ್ ಕಾಸರಗೋಡು ಅವರ 60ರ ವಸಂತೋತ್ಸವ ಕಾರ್ಯಕ್ರಮದ ಅಂಗವಾಗಿ ವರ್ಷಪೂರ್ತಿ ನಡೆಯುವ ಕಲಾಸರಣಿಯ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.
'ಯಕ್ಷಗಾನ ವಚನೋತ್ಸವ'ಎಂಬ ಹೆಸರಿನಲ್ಲಿ ಗಾನ ಮಾಧುರ್ಯ, ಮಾತಿನ ಮಂಟಪಕ್ಕೆ ಮಹತ್ವ ನೀಡುವ ಯಕ್ಷಗಾನ ವೈಭವ-ತಾಳಮದ್ದಳೆ ಈ ಸಂದರ್ಭ ಪ್ರಸ್ತುತಗೊಳ್ಳಲಿದೆ. ಬೆಳಗ್ಗೆ 9.30ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕಾರ್ಯಕ್ರಮ ಸಮಿತಿ ಕಾರ್ಯದರ್ಶಿ ಕೆ.ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಎಡನೀರು, ನಗರಸಭಾ ಸದಸ್ಯೆ ಅಶ್ವಿನಿ ಜಿ. ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ನಡೆಯುವ ಗಾನವೈಭವ ಕಾರ್ಯಕ್ರಮದಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಡಾ. ಸತೀಶ್ ಪುಣಿಂಚಿತ್ತಾಯ ಪೆರ್ಲ, ಡಾ, ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ಚೆಂಡೆ-ಮದ್ದಳೆಯಲ್ಲಿ ಲವಕುಮಾರ್ ಐಲ, ಕೌಶಿಕ್ ರಾವ್ ಪುತ್ತಿಗೆ ಸಹಕರಿಸುವರು.
ಮಧ್ಯಾಹ್ನ 1ಗಂಟೆಗೆ ನಡೆಯುವ ಮೊದಲ ತಾಳಮದ್ದಳೆ'ಅಂಗದ ಸಂಧಾನ'ದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸುವರು. ಅರ್ಥಧಾರಿಗಳಾಗಿ ಉಜಿರೆ ಅಶೋಕ್ ಭಟ್, ಸರ್ಪಂಗಳ ಈಶ್ವರ ಭಟ್, ದಿವಾಣ ಶಿವಶಂಕರ ಭಟ್ ಸಹಕರಿಸುವರು. 3ಗಂಟೆಗೆ ನಡೆಯುವ ಎರಡನೇ ತಾಳಮದ್ದಳೆ'ಮಾಗಧ ವಧೆ'ಯಲ್ಲಿ ಪುತ್ತಿಗೆ ರಘುರಾಂ ಹೊಳ್ಳ ಭಾಗವತರಾಗಿ ಸಹಕರಿಸುವರು. ಅರ್ಥಧಾರಿಗಳಾಗಿ ಡಾ. ಎಂ. ಪ್ರಭಾಕರ ಜೋಷಿ, ಪ್ರೊ. ಎಂ.ಎಲ್ ಸಾಮಗ, ವಿನಯ ಆಚಾರ್ ಹೊಸಬೆಟ್ಟು ಸಹಕರಿಸುವರು. ಸಂಜೆ 6ಕ್ಕೆ ನಡೆಯುವ ಮೂರನೇ ತಾಳಮದ್ದಳೆ'ಕರ್ಣಾರ್ಜುನ'ದಲ್ಲಿ ಭಾಗವತರಾಗಿ ಡಾ. ಸತೀಶ್ ಪುಣಿಂಚಿತ್ತಾಯ ಪೆರ್ಲ, ಅರ್ಥಧಾರಿಗಳಾಗಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ವೇದಮೂರ್ತಿ ನಾಗೇಂದ್ರ ಭಟ್ ಕೂಡ್ಲು, ಸುಬ್ರಹ್ಮಣ್ಯ ಬೈಪಡಿತ್ತಾಯ, ಜಿ.ಕೆ ಅಡಿಗ ಕೂಡ್ಲು, ಶೇಣಿ ವೇಣುಗೋಪಾಲ ಭಟ್ ಸಹಕರಿಸುವರು.
ನಾಳೆ 'ಕಾಸರಗೋಡು ಯಕ್ಷಗಾಯನ-ವಚನೋತ್ಸವ'ಕಾರ್ಯಕ್ರಮ: ತೆಂಕು ತಿಟ್ಟಿನ ಬಹುತೇಕ ಕಲಾವಿದರು ಪ್ರಸ್ತುತಪಡಿಸಲಿರುವ ಅಪೂರ್ವ ಗಾನ ಮಾಧುರ್ಯ
0
ಜನವರಿ 19, 2023
Tags


