ಪೆರ್ಲ: ದಶಕಗಳಷ್ಟು ಹಿಂದೆ, 1953ನೇ ಇಸವಿಯಲ್ಲಿ ನಿರ್ಮಿಸಲಾದ ಸುಮಾರು 1.5 ಕಿಮೀ ಉದ್ದವಿರುವ ಬಣ್ಪುತ್ತಡ್ಕ~ಮುಣ್ಚಿಕಾನ ರಸ್ತೆಯು ಮುಣ್ಚಿಕಾನ ಪರಿಸರದಲ್ಲಿರುವ ಪರಿಶಿಷ್ಟ ಜಾತಿಯ ಕಾಲನಿಯೂ ಸೇರಿದಂತೆ ಸುಮಾರು ಮೂವತ್ತಕ್ಕಿಂತಲೂ ಅಧಿಕ ಕುಟುಂಬಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು ನೂರಾರು ಜನರು ತಮ್ಮ ದೈನಂದಿನ ವ್ಯವಹಾರಕ್ಕಾಗಿ ಈ ರಸ್ತೆಯನ್ನೇ ನೆಚ್ಚಿಕೊಂಡಿದ್ದಾರೆ. ಬದಿಯಡ್ಕ ಪಂಚಾಯತಿನ ನಾಲ್ಕನೇ ವಾರ್ಡಿಗೆ ಸೇರಿದ ಈ ರಸ್ತೆಯು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಾಣದಿರುವುದು ಮಾತ್ರ ವಿಷಾದನೀಯ. ಇತ್ತೀಚೆಗೆ ಉಕ್ಕಿನಡ್ಕದಲ್ಲಿ ಆರಂಭವಾದ ಕಾಸರಗೋಡು ಸರ್ಕಾರಿ ಮೆಡಿಕಲ್ ಕಾಲೇಜಿಗೆ ತೀರಾ ಹತ್ತಿರದ ಪ್ರದೇಶವಾದ ಮುಣ್ಚಿಕಾನದ ಭಾಗದ ಜನರಿಗೆ ಇತರ ಪ್ರದೇಶಗಳಿಗೆ ಸಂಪರ್ಕಿಸಲು ಈ ರಸ್ತೆಯೇ ಮುಖ್ಯ ದ್ವಾರವಾಗಿದ್ದು ಆಂಬುಲೆನ್ಸ್, ಶಾಲಾ ವಾಹನಗಳು, ಆಟೋರಿಕ್ಷಾಗಳು ಸೇರಿದಂತೆ ದಿನನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಓಡಾಟಕ್ಕೆ ತೀವ್ರ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸದ್ಯ ಸದರಿ ರಸ್ತೆಯು ಅತ್ಯಂತ ಶೋಚನೀಯ ಸ್ಥಿತಿಗೆ ತಲುಪಿದ್ದು, ಸಮರ್ಪಕ ಚರಂಡಿಯ ವ್ಯವಸ್ಥೆ ಇಲ್ಲದೇ ಮಳೆಗಾಲದಲ್ಲಿ ಕೆಸರು ಹಾಗೂ ಹೊಂಡಗಳಿಂದ ತುಂಬಿದರೆ, ಬೇಸಗೆಯಲ್ಲಿ ಭಾರೀ ಧೂಳಿನಿಂದ ಆವೃತವಾಗಿ ಶಾಲಾಮಕ್ಕಳು, ವೃದ್ಧರು, ಕೂಲಿ ಕಾರ್ಮಿಕರು, ಕೃಷಿಕರೇ ಮೊದಲಾದ ಈ ರಸ್ತೆಯನ್ನು ಅವಲಂಬಿಸಿದ ಪರಿಸರದ ಜನರು ತಮ್ಮ ದೈನಂದಿನ ಜೀವನದಲ್ಲಿ ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಬೇರೆ ಬೇರೆಯ ರೀತಿಯಲ್ಲಿ ಮನವಿ ಸಲ್ಲಿಸಿದರೂ ಅಭಿವೃದ್ಧಿಯ ಯಾವುದೇ ಪ್ರಯೋಜನವಾಗದಿರುವುದು ಪರಿಸರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದರಿಂದ ಬೇಸತ್ತ ಮುಣ್ಚಿಕಾನ ಪರಿಸರದ ಎಲ್ಲಾ ಜನರು ಒಗ್ಗಟ್ಟಾಗಿ ಭಾನುವಾರ ಒಂದು ಸಾಂಕೇತಿಕ ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸಿ ರಸ್ತೆಯ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳಿಗೆ ಮತ್ತೊಮ್ಮೆ ಒತ್ತಾಯಿಸುವ ಮೂಲಕ ಎಚ್ಚರಿಕೆಯ ಸಂದೇಶ ಕಳುಹಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಾಲ್ಕನೇ ವಾರ್ಡಿನ ಸದಸ್ಯ ಈಶ್ವರ ನಾಯ್ಕ್ ಹಾಗೂ ನೆರೆದಿದ್ದ ಸುಮಾರು ಎಪ್ಪತ್ತಕ್ಕಿಂತಲೂ ಅಧಿಕ ಜನರ ಸಮ್ಮುಖದಲ್ಲಿ ಬಣ್ಪುತ್ತಡ್ಕ ಮುಣ್ಚಿಕಾನ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯನ್ನು ರಚಿಸಿ ಅತೀ ಶೀಘ್ರದಲ್ಲಿ ಸಂಪೂರ್ಣ ರಸ್ತೆ ಅಭಿವೃದ್ಧಿಗೆ ಪ್ರಧಾನಮಂತ್ರಿ ಸಹಿತ ಎಲ್ಲಾ ಮಟ್ಟದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಇದಾಗಿಯೂ ಸದ್ಯದಲ್ಲೇ ರಸ್ತೆ ಅಭಿವೃದ್ಧಿ ಕಾಣದಿದ್ದಲ್ಲಿ ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

.jpg)

