ಬದಿಯಡ್ಕ: ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿಯನ್ನು ನೀಡುವ ಸಂಗೀತವು ಪರಿಸರಪ್ರದೇಶದಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುತ್ತದೆ. ಗುರುಮುಖೇನ ಸಂಗೀತವನ್ನು ಕಲಿತು ನಿರಂತರ ಸಂಗೀತಾಭ್ಯಾಸವನ್ನು ಮಾಡುವುದರಿಂದ ಮನೆಗಳಲ್ಲಿ ಉತ್ತಮ ಚಿಂತನೆಗಳು ಮೂಡಿಬರಲು ಸಾಧ್ಯವಿದೆ ಎಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ ಹೇಳಿದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ನೀರ್ಚಾಲು ಆರಾಧನಾ ಸಂಗೀತ ಶಾಲೆಯ ವಾರ್ಷಿಕೋತ್ಸವವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸನಾತನ ಭಾರತೀಯ ಸಂಸ್ಕøತಿಗೆ ಪೂರಕವಾದ ವಿದ್ಯೆಯನ್ನು ಮಕ್ಕಳಿಗೆ ನೀಡುವಂತಹ ಇಂತಹ ಸಂಗೀತಶಾಲೆಗಳು ಇನ್ನಷ್ಟು ಪ್ರಗತಿಯನ್ನು ಕಾಣಲಿ. ಇದಕ್ಕೆ ನಾಡಿನ ಜನರು ಬೆಂಬಲವಾಗಿ ನಿಲ್ಲಬೇಕು ಎಂದರು.
ಸಂಗೀತ ಗುರುಗಳಾದ ವಿದುಷಿ ವಿಜಯಲಕ್ಷ್ಮೀ ಬೆದ್ರಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಾಪಕ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಬಾಲರಾಜ್ ಬೆದ್ರಡಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಂಗೀತೋಪಾಸನೆ ನಡೆಯಿತು. ಪಾಲಕರು ಹಾಗೂ ಸಂಗೀತಾಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.



