HEALTH TIPS

ಸರಕಾರಿ ಶಾಲೆಗಳಲ್ಲಿ 10 ಲಕ್ಷ ಬೋಧಕ ಹುದ್ದೆಗಳು ಖಾಲಿ: ಕಾಲಮಿತಿಯಲ್ಲಿ ಭರ್ತಿಗೆ ಸಂಸದೀಯ ಸಮಿತಿಯ ಆಗ್ರಹ

                ವದೆಹಲಿ :ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಸಕಾಲಿಕ ಅನುಷ್ಠಾನಕ್ಕಾಗಿ ಸರಕಾರಿ ಶಾಲೆಗಳಲ್ಲಿ ಖಾಲಿಯಿರುವ ಎಲ್ಲ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವಂತೆ ಶಿಕ್ಷಣ ಕುರಿತ ಸಂಸದೀಯ ಸ್ಥಾಯಿ ಮಂಡಳಿಯು ಶಿಕ್ಷಣ ಸಚಿವಾಲಯಕ್ಕೆ ಸೂಚಿಸಿದೆ.

                  ಶಿಕ್ಷಣ ಇಲಾಖೆಯು ಒದಗಿಸಿರುವ ಮಾಹಿತಿಯಂತೆ 2022, ಡಿ.31ಕ್ಕೆ ಇದ್ದಂತೆ ದೇಶಾದ್ಯಂತ ಸರಕಾರಿ ಪ್ರಾಥಮಿಕ,ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಾಲೆಗಳಲ್ಲಿ ಸುಮಾರು 10 ಲಕ್ಷ ಬೋಧಕ ಹುದ್ದೆಗಳು ಖಾಲಿಯಿವೆ. ರಾಜ್ಯಮಟ್ಟದಲ್ಲಿ ಮಂಜೂರಾದ 62,71,380 ಹುದ್ದೆಗಳ ಪೈಕಿ 9,85,565 ಅಥವಾ ಶೇ.15.7ರಷ್ಟು ಖಾಲಿಯಿವೆ.

               ಮಂಗಳವಾರ ಬಹಿರಂಗಗೊಳಿಸಲಾಗಿರುವ ಸಂಸದೀಯ ಸಮಿತಿಯ ವರದಿಯು ಕಾಲಮಿತಿಯಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುವಂತೆ ಶಿಫಾರಸು ಮಾಡಿದೆ.

                     ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು 2023-24ನೇ ವಿತ್ತವರ್ಷಕ್ಕಾಗಿ ಸಲ್ಲಿಸಿದ್ದ ಅನುದಾನಗಳ ಕೋರಿಕೆಯನ್ನು ಪರಿಶೀಲಿಸಿದ ಬಳಿಕ ಬಿಜೆಪಿ ಸಂಸದ ವಿಜಯ ಠಾಕೂರ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ.

                  ಸಮಿತಿಗೆ ಒದಗಿಸಲಾಗಿರುವ ಮಾಹಿತಿಯಂತೆ ಪ್ರಾಥಮಿಕ ಶಾಲೆಗಳಲ್ಲಿ 7,47,565,ಮಾಧ್ಯಮಿಕ ಶಾಲೆಗಳಲ್ಲಿ 1,46,334 ಮತ್ತು ಉನ್ನತ ಮಾಧ್ಯಮಿಕ ಶಾಲೆಗಳಲ್ಲಿ 92,666 ಹುದ್ದೆಗಳು ಖಾಲಿಯಿವೆ.

                  ಎನ್‌ಇಪಿ, 2020ರಲ್ಲಿ ಹೇಳಿರುವಂತೆ 30:1 ವಿದ್ಯಾರ್ಥಿ-ಶಿಕ್ಷಕ ಅನುಪಾತವನ್ನು ಸಾಧಿಸಲು ಕಾಲಮಿತಿಯಲ್ಲಿ ಬೋಧಕ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಇಲಾಖೆಯು ರಾಜ್ಯ ಸರಕಾರಗಳನ್ನು ಪ್ರೋತ್ಸಾಹಿಸಬೇಕು ಎಂದು ಶಿಫಾರಸು ಮಾಡಿರುವುದಾಗಿ ಸಂಸದೀಯ ಸ್ಥಾಯಿ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.

                                                     ನೇಮಕಾತಿಯಲ್ಲಿ ಪಾರದರ್ಶಕತೆಯ ಕೊರತೆ:

                   ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ ಮತ್ತು ತೊಡಕಿನದಾಗಿದೆ ಎಂದು ಬೆಟ್ಟು ಮಾಡಿರುವ ಸಮಿತಿಯು,ಕೆಲವು ಶಿಕ್ಷಣ ಸಮಿತಿಗಳು ಸೂಚಿಸಿರುವಂತೆ ರಾಜ್ಯಮಟ್ಟದಲ್ಲಿ ಸ್ವಾಯತ್ತ ಶಿಕ್ಷಕರ ನೇಮಕಾತಿ ಮಂಡಳಿಯನ್ನು ರಚಿಸುವಂತೆ ಶಿಫಾರಸು ಮಾಡಿದೆ.
ಸಾಂಕ್ರಾಮಿಕದ ಬಳಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಇಲಾಖೆಯ ಪ್ರಗತಿಯನ್ನು ಒಪ್ಪಿಕೊಂಡಿರುವ ಸಮಿತಿಯು,ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಮೀನ್ಸ್-ಕಮ್-ಮೆರಿಟ್ ವಿದ್ಯಾರ್ಥಿ ವೇತನ ಯೋಜನೆಯಡಿ ಹಣಕಾಸಿನ ಸದುಪಯೋಗವನ್ನು ಖಚಿತಪಡಿಸುವಂತೆ ಸೂಚಿಸಿದೆ.

               ಕಳೆದ ವರ್ಷ ಪರಿಚಯಿಸಲಾಗಿರುವ ಕೇಂದ್ರ ಸರಕಾರದ 'ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ'ಯೋಜನೆ ಕುರಿತಂತೆ ಸಮಿತಿಯು,ಇಲಾಖೆಯು ಇದಕ್ಕೆ ಇನ್ನೂ ಸಹಿ ಹಾಕದಿರುವ ಎಂಟು ರಾಜ್ಯಗಳ ಜೊತೆ ವಿಷಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದೆ. ಬಿಹಾರ, ದಿಲ್ಲಿ, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ, ಒಡಿಶಾ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಈ ರಾಜ್ಯಗಳಾಗಿವೆ. ಯೋಜನೆಯಡಿ ಐದು ವರ್ಷಗಳಲ್ಲಿ 27,360 ಕೋಟಿ ರೂ.ಗಳ ವೆಚ್ಚದಲ್ಲಿ 14,500 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಈ ವೆಚ್ಚದಲ್ಲಿ 18,128 ಕೋಟಿ ರೂ.ಗಳನ್ನು ಕೇಂದ್ರ ಸರಕಾರವು ಭರಿಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries