ತಾಳ್ಮೆ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯವಾಗುತ್ತದೆ. ಯಾಕಂದ್ರೆ ತಾಳ್ಮೆ ಒಂದು ರೀತಿ ಮನುಷ್ಯನಿಗೆ ಆಸ್ತಿ ಇದ್ದಂತೆ. ಯಾರಲ್ಲಿ ತಾಳ್ಮೆ ಇರುತ್ತದೆಯೋ ಆ ವ್ಯಕ್ತಿ ಇಡೀ ಜಗತ್ತನ್ನು ಗೆದ್ದ ಹಾಗೆ. ಯಾರಲ್ಲಿ ತಾಳ್ಮೆ ಇರುವುದಿಲ್ಲವೋ ಆತ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಾನೆ. ಇಲ್ಲ ಅಂದ್ರೆ ಕೋಪದ ಕೈಗೆ ಬುದ್ಧಿ ಕೊಟ್ಟು ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾನೆ.
ಏಕಾಏಕಿ ನಮ್ಮಲ್ಲಿ ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಕಷ್ಟ. ಇದಕ್ಕಾಗಿ ಯೋಗ, ಧ್ಯಾನ ಮಾಡುವವರು ಕೂಡ ಇದ್ದಾರೆ. ಈ ರೀತಿ ಮಾಡುವುದರಿಂದ ತಾಳ್ಮೆಯನ್ನು ನೀವು ರೂಢಿಸಿಕೊಳ್ಳುತ್ತೀರಿ ಅಂತ ಹೇಳೋದಿಕ್ಕಾಗೋದಿಲ್ಲ. ಹೀಗಾಗಿ ಚಿಕ್ಕಂದಿನಲ್ಲೇ ಮಕ್ಕಳಲ್ಲಿ ತಾಳ್ಮೆಯನ್ನು ರೂಢಿಸಿಕೊಳ್ಳುವಂತೆ ಮಾಡಿದರೆ ಉತ್ತಮ. ಅಷ್ಟಕ್ಕು ಮಕ್ಕಳಲ್ಲಿ ತಾಳ್ಮೆಯನ್ನು ಬೆಳೆಸಿಕೊಳ್ಳುವಂತೆ ಮಾಡೋದು ಹೇಗೆ? ಈ ಟಿಪ್ಸ್ ಪಾಲಿಸಿದ್ರೆ ಖಂಡಿತ ಮಕ್ಕಳಲ್ಲಿ ತಾಳ್ಮೆ ಹೆಚ್ಚಾಗುತ್ತದೆ.1. ಚಿಕ್ಕ ವಯಸ್ಸಿನಲ್ಲೇ ಅಭ್ಯಾಸ ಮಾಡಿಸಿ
ನೀವು ಯಾವುದೇ ಹೊಸ ವಿಚಾರವನ್ನು ಕಲಿಸಬೇಕಾದರೂ ಮಕ್ಕಳಿಗೆ ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಸಬೇಕು. ದೊಡ್ಡದಾದ ಮೇಲೆ ನೀವು ಏನನ್ನೇ ಕಲಿಸಿ ಕೊಟ್ಟರೂ ಮಕ್ಕಳು ಅದನ್ನು ಕೇಳೋದಕ್ಕೆ ಸಿದ್ಧರಿರೋದಿಲ್ಲ. ಉದಾಹರಣೆಗೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ನೀವು ಏನಾದರೂ ಕೊಡದೇ ಹೋದರೆ ಅವರು ಅಳುತ್ತಾರೆ ಅಥವಾ ಅಲ್ಲೇ ಹೊರಳಾಡುತ್ತಾ ಹಠ ಮಾಡುತ್ತಾರೆ. ಇದರ ಅರ್ಥ ಅವರಿಗೆ ತಾಳ್ಮೆ ಇಲ್ಲ ಎಂದು.
ಹೀಗಾಗಿ ಚಿಕ್ಕ ಮಕ್ಕಳಿಗೆ ಅವರು ಹಠ ಮಾಡುವಾಗಲೇ ನೀವು ಕೊಂಚ ಗಂಭೀರವಾಗಿ ನಡೆದುಕೊಳ್ಳಬೇಕು. ಮಗು ಹಠ ಮಾಡುತ್ತಾನೆ ಎಂದು ಆತ ಕೇಳಿದ್ದನ್ನೆಲ್ಲಾ ಕೊಡುವುದು ಸರಿಯಲ್ಲ. ಮಗು ಹಠ ಮಾಡಿದರೆ ನಿಮ್ಮ ಹಠವು ಹೆಚ್ಚಾಗಬೇಕು. ತಾಳ್ಮೆಯಿಂದ ಇರುವವರೆಗೂ ಮಗುವಿಗೆ ಬೇಕಾದುದ್ದನ್ನು ನೀವು ನೀಡಲೇಬಾರದು. ಈ ರೀತಿ ಮಾಡಿದರೆ ನಿಧಾನವಾಗಿ ಮಗು ತಾಳ್ಮೆಯನ್ನು ಬೆಳೆಸಿಕೊಳ್ಳುತ್ತದೆ.
2. ಸ್ವಯಂ ನಿಯಂತ್ರಣವಿರಲಿ
ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸ್ವಯಂ ನಿಯಂತ್ರಣವನ್ನು ಕಲಿಸೋದು ಪೋಷಕರಾದವರ ಕರ್ತವ್ಯ. ಅವರ ಹಠ ಮಾಡಿದ್ದೆಲ್ಲಾ ಅವರಿಗೆ ಸುಲಭವಾಗಿ ಸಿಗುವಂತಾಗಬಾರದು. ಅವರ ಆತಂಕ, ಕೋಪ, ಕ್ರಿಯೆಗಳು, ಭಾವನೆಗಳನ್ನು ಅವರು ಸ್ವಯಂ ನಿಯಂತ್ರಿಸಿಕೊಳ್ಳಬೇಕು. ಎಲ್ಲವೂ ತಕ್ಷಣಕ್ಕೆ ಸಿಗಬೇಕೆಂಬ ಹಠ ಇರಲೇಬಾರದು.
ಉದಾಹರಣೆಗೆ ನಿಮ್ಮ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ವಿಡಿಯೋ ಗೇಮ್ ಆಡುವಾಗ ಒಬ್ಬನ ಕೈಯಲ್ಲಿ ಅದರ ರಿಮೋಟ್ ಇದ್ದರೆ ಇನ್ನೊಬ್ಬ ಆತನ ಸರದಿಗಾಗಿ ಕಾಯುತ್ತಾನೆ. ತನ್ನ ಸರದಿ ಬಂದಾಗ ಆತ ಅಳುತ್ತಾ, ಅರಚುತ್ತಾ ಗಲಾಟೆ ಮಾಡಬಾರದು. ತನ್ನ ಕೈಗೆ ರಿಮೋಟ್ ಸಿಗುವವರೆಗೂ ತಾಳ್ಮೆಯಿಂದ ಇರುವ ಗುಣವನ್ನು ಆತ ಬೆಳೆಸಿಕೊಳ್ಳಲಿ.
3. ತಡವಾದರೂ ಕಾಯುವ ಗುಣ ಇರಬೇಕು
ಕೆಲವು ಮನೆಗಳಲ್ಲಿ ಪೋಷಕರು ಮಕ್ಕಳನ್ನು ಯಾವ ರೀತಿ ಸಾಕಿರುತ್ತಾರೆ ಎಂದರೆ ತುಂಬಾನೇ ಮುದ್ದು ಮಾಡಿ ಸಾಕಿರುತ್ತಾರೆ. ಮಕ್ಕಳು ಕೇಳಿದ್ದೆಲ್ಲಾ ಕ್ಷಣ ಮಾತ್ರದಲ್ಲಿ ಅವರ ಕಾಲ ಬುಡದಲ್ಲಿ ಬಂದು ಬಿದ್ದಿರುತ್ತದೆ. ಹೀಗಾಗಿ ಅವರಿಗೆ ವಸ್ತುವಿನ ಮೌಲ್ಯದ ಬಗ್ಗೆ ಗೊತ್ತಿರೋದಿಲ್ಲ. ಒಂದು ವೇಳೆ ತನಗೆ ಬೇಕಾಗಿರೋದು ಪೋಷಕರು ಕೊಡಿಸೋದು ಕೊಂಚ ತಡವಾದರೂ ಇಡೀ ಆಕಾಶ-ಭೂಮಿಯನ್ನು ಒಂದು ಮಾಡುವಷ್ಟು ಕೋಪ ಅವರಿಗಿರುತ್ತದೆ.
ಹೀಗಾಗಿ ಮಕ್ಕಳಿಗೆ ಯಾವುದೇ ವಸ್ತುವನ್ನಾದರೂ ಸುಲಭವಾಗಿ ದಕ್ಕುವಂತೆ ಮಾಡಬೇಡಿ. ಎಲ್ಲದಕ್ಕೂ ಅವರು ಕಾಯಬೇಕು. ಕಾಯುವಾಗ ಇರುವ ತಾಳ್ಮೆಯನ್ನು ಮಕ್ಕಳು ತಮ್ಮಲ್ಲಿ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ದೊಡ್ಡವರಾದ ಮೇಲೆ ಅವರ ಮುಂಗೋಪಿ ಗುಣ ಭವಿಷ್ಯಕ್ಕೆ ಮುಳುವಾಗಿ ಬಿಡಬಹುದು.
4. ಕಾಯುವುದರಲ್ಲಿ ಸುಖವಿದೆ ಅನ್ನೋದನ್ನು ಅರ್ಥ ಮಾಡಿಸಿ
ತಾಳ್ಮೆ ಎಂಬ ಆಸ್ತಿ ನಮ್ಮ ಬಳಿ ಇದ್ದಾಗ ನಮ್ಮಲ್ಲಿ ಕಾಯುವ ಗುಣ ತನ್ನಷ್ಟಕ್ಕೆ ಬರುತ್ತದೆ. ಕಾದು ಹೊಡೆಯೋದ್ರಲ್ಲಿ ಮಜಾ ಇದೆ ಅನ್ನೋ ಮಾತನ್ನು ನೀವು ಕೇಳಿರ್ತೀರಿ. ಅದೇ ರೀತಿ ಕಾಯುವುದರಲ್ಲಿ ಮಜವಿದೆ ಅನ್ನೋದನ್ನು ನಿಮ್ಮ ಮಕ್ಕಳಿಗೂ ಅರ್ಥ ಮಾಡಿಸಿ. ಆಗ ನಿಮ್ಮ ಮಕ್ಕಳು ಯಾವುದೇ ರೀತಿ ಹಠ ಮಾಡದೇ ತಮ್ಮ ಸರದಿಗಾಗಿ ಕಾಯುತ್ತಾರೆ.
5. ಪೋಷಕರಿಂದಲೇ ಆ ಅಭ್ಯಾಸ ರೂಢಿಯಾಗಲಿ
ಮನೆಯೇ ಮೊದಲ ಪಾಠ ಶಾಲೆ ಅಂತಾರೆ ಅದೇ ರೀತಿ ಮಕ್ಕಳಿಗೆ ತಾಳ್ಮೆ ಅನ್ನುವುದು ಪೋಷಕರಿಂದಲೇ ಬಳುವಳಿಯಾಗಿ ಬಂದರೆ ತುಂಬಾನೇ ಒಳ್ಳೆಯದು. ಪೋಷಕರಲ್ಲಿ ಯಾವಾಗ ತಾಳ್ಮೆ ಇರುತ್ತದೆಯೋ ಮಕ್ಕಳು ಕೂಡ ನಿಮ್ಮನ್ನು ನೋಡಿ ಈ ಗುಣವನ್ನು ಕಲಿತುಕೊಳ್ಳುತ್ತಾರೆ. ಇನ್ನೂ ನಿಮ್ಮ ದೊಡ್ಡ ಮಗುವಿಗೆ ಈ ಗುಣ ನಿಮ್ಮಿಂದ ಬಂದರೆ ಚಿಕ್ಕ ಮಗು ತನ್ನಿಂದ ತಾನೇ ಈ ಗುಣ ಬೆಳೆಸಿಕೊಳ್ಳುತ್ತದೆ.
ಮಕ್ಕಳಿಗಾಗಿ ನೀವು ಹಣ, ಆಸ್ತಿ ಯಾವುದನ್ನು ಸಂಪಾದಿಸದಿದ್ದರೂ ಪರವಾಗಿಲ್ಲ. ಆದರೆ ಮುಖ್ಯವಾಗಿ ಕೆಲವೊಂದು ಸಂಸ್ಕಾರಗಳು ಹಾಗೂ ಒಳ್ಳೆಯ ಗುಣಗಳನ್ನು ಅವರು ಬೆಳೆಸಿಕೊಳ್ಳುವಂತಾಗಬೇಕು.