ನವದೆಹಲಿ : ಗುಜರಾತ್ ಕಛ್ ಮತ್ತು ಸೌರಾಷ್ಟ್ರ ವಲಯದಲ್ಲಿ ಬಿಪೊರ್‌ಜಾಯ್ ಚಂಡಮಾರುತವು ಅಪ್ಪಳಿಸುವ ಮೂರು ದಿನಗಳ ಮೊದಲು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಇದರಿಂದಾಗಿ ಈವರೆಗೆ ಯಾವುದೇ ಸಾವು-ನೋವು ಉಂಟಾಗಲಿಲ್ಲ.
ಇದು ವಿಪತ್ತು ನಿರ್ವಹಣೆಗೆ ಒಂದು ಅತ್ಯುತ್ತಮ ಉದಾಹರಣೆ ಎಂದೂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂಡಮಾರುತದ ಹಾನಿ ತಡೆಯುವ ಸಿದ್ಧತೆಗಳ ಮೇಲ್ವಿಚಾರಣೆಗಾಗಿಯೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಒಬ್ಬ ಸಚಿವರನ್ನು ನಿಯೋಜಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿ ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಅಲ್ಲದೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೂ ಪ್ರಧಾನಿ ಮಾರ್ಗದರ್ಶನ ನೀಡಿದ್ದರು ಎಂದು ಅವರು ಹೇಳಿದ್ದಾರೆ.
ಸಾವು-ನೋವು ತಡೆಯುವ ಗುರಿ ಇಟ್ಟುಕೊಂಡು, ಚಂಡಮಾರುತ ಪೀಡಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಜನರನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಕಛ್ ಜಿಲ್ಲೆಯೊಂದರಲ್ಲೇ ಸುಮಾರು 198 ಹಳ್ಳಿಗಳಿಂದ ಜನರನ್ನು ಸ್ಥಳಾಂತರಿಸಲಾಯಿತು. ಪರಿಹಾರ ಕೇಂದ್ರಗಳಲ್ಲಿ 707 ಮಕ್ಕಳು ಜನಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಸ್ಥಳಾಂತರಕ್ಕೆ ಜನರ ಮನವೊಲಿಸುವುದು ಭಾರಿ ಸವಾಲಾಗಿತ್ತು. ಪಂಚಾಯಿತಿಗಳ ಮಟ್ಟದಿಂದ ಕೇಂದ್ರ ಸಚಿವರವರೆಗೆ ಜನಪ್ರತಿನಿಧಿಗಳು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಿದರು. ಎಲ್ಲರ ಪರಿಶ್ರಮದಿಂದ ಸ್ಥಳಾಂತರ ಪ್ರಕ್ರಿಯೆ ಜೂನ್ 12ರಿಂದ 14ರವರೆಗೆ ಮೂರು ದಿನಗಳಲ್ಲಿ ಯಶಸ್ವಿಯಾಗಿ ನಡೆಯಿತು' ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೀನುಗಾರಿಕಾ ಬಂದರುಗಳಿಗೆ ನೆಲೆಯಾದ ಕಾಂಡ್ಲಾ, ಮುಂದ್ರಾ, ಮಾಂಡ್ವಿ ಮತ್ತು ಜಖೌನಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ಸಾವಿರಾರು ಟ್ರಕ್‌ಗಳ ಓಡಾಟ ಮತ್ತು ಅಸಂಖ್ಯ ಹಡಗುಗಳ ಉಪಸ್ಥಿತಿಯ ನಡುವೆ ಬಂದರುಗಳಿಂದ ಕಾರ್ಮಿಕರು ಮತ್ತು ಹಡಗು, ದೋಣಿಗಳ ಸುರಕ್ಷತೆ ಖಾತ್ರಿಪಡಿಸುವುದು ಆದ್ಯತೆಯಾಗಿತ್ತು. ಇದಕ್ಕಾಗಿ ಸಂಬಂಧಿಸಿದ ಎಲ್ಲರ ಜತೆಗೆ ಸಭೆ ನಡೆಸಿ, ತೆರವು ಕಾರ್ಯ ಸುಗಮವಾಗಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಛ್ ಜಿಲ್ಲೆಯ ಜಖೌ ಬಳಿ ಗುರುವಾರ ಸಂಜೆ ಅಪ್ಪಳಿಸಿದ್ದ ಚಂಡಮಾರುತದಿಂದ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಮನೆಗಳಿಗೆ ಹಾನಿಯಾಗಿದೆ. ರಾಜ್ಯದ ಎಂಟು ಕರಾವಳಿ ಜಿಲ್ಲೆಗಳಲ್ಲಿ ಹಾನಿ ಆಗಿದೆ.




.webp)
