ತಿರುವನಂತಪುರಂ: ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡದೆ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಅನುತ್ತೀರ್ಣಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಆಯೋಗದ ಹಂಗಾಮಿ ಅಧ್ಯಕ್ಷ ಕೆ. ಬೈಜುನಾಥ್ ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.
ಕೇರಳ ವಿಶ್ವವಿದ್ಯಾನಿಲಯದ ಅಡಿಯಲ್ಲಿರುವ ಸ್ಕೂಲ್ ಆಫ್ ಡಿಸ್ಟೆನ್ಸ್ ಎಜುಕೇಶನ್‍ನಲ್ಲಿ ನೋಂದಾಯಿಸಲಾದ ಪಂದಳಂ ಮತ್ತು ಪೆರಯಂ ಎನ್‍ಎಸ್‍ಎಸ್ ಕಾಲೇಜು ಕೇಂದ್ರಗಳಲ್ಲಿ ಬಿಎ ಮಲಯಾಳಂ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪಂದಳಂ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳು ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬಳಿಕ ಕೇರಳ ವಿಶ್ವವಿದ್ಯಾಲಯದ ಎಡವಟ್ಟು ಬೆಳಕಿಗೆ ಬಂದಿದೆ.
ಪರೀಕ್ಷೆಗೆ ಹಾಜರಾದವರೆಲ್ಲರೂ ಅನುತ್ತೀರ್ಣರಾದ ನಂತರ ವಿಶ್ವವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಕಾರಣ ಹುಡುಕಿದಾಗ ಹಾಜರಾತಿ ಕೊರತೆ ಕಾರಣ ಎಂದು ತಿಳಿದುಬಂದಿದೆ. ಆದರೆ ಹಾಜರಾತಿ ವಿವರವನ್ನು ಪರಿಶೀಲಿಸಿದಾಗ ವಿದ್ಯಾರ್ಥಿಗಳು ಹಾಜರಿರುವುದು ಕಂಡುಬಂದಿದೆ. ನಂತರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಶಿಬಿರಕ್ಕೆ ತರದೇ ಫಲಿತಾಂಶ ಪ್ರಕಟಿಸಿರುವುದು ಸ್ಪಷ್ಟವಾಯಿತು. ಘಟನೆ ಕುರಿತು ದೂರು ನೀಡಿದ ವಿದ್ಯಾರ್ಥಿಗಳಿಗೆ ಹಣ ನೀಡಿದರೆ ಮರು ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಬಹುದು ಎಂದು ಅಧಿಕಾರಿಗಳು ತಿಳಿಸಿರುವುದೂ ಬೆಳಕಿಗೆ ಬಂದಿದೆ.


