ಮಂಜೇಶ್ವರ : ಗಡಿನಾಡಿನ ಪ್ರಸಿದ್ದ ಯಕ್ಷಗಾನ ತಂಡವಾದ ಯಕ್ಷಬಳಗ ಹೊಸಂಗಡಿ ತಂಡದ 33ನೇ ವರ್ಷದ ಕರ್ಕಾಟಕ ಮಾಸ ಯಕ್ಷಗಾನ ತಾಳಮದ್ದಳೆ ಕೂಟ ನಾಲ್ಕೂ ವಾರಗಳಲ್ಲಿ ಯಶಸ್ವಿಯಾಗಿ ಜರಗಿ ಸಮಾರೋಪ ಸಮಾರಂಭ ಆ.20 ರಂದು ಭಾನುವಾರ ಜರಗಲಿದೆ.
ಬೆಳಿಗ್ಗೆ 9.30ರಿಂದ ಮೂಡಂಬೈಲು ಅಪ್ಪತ್ತಿಮಾರು ಶಿವರಾಮ ಪದಕಣ್ಣಾಯರ ಮನೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಯಕ್ಷಗುರು ಹಾಗೂ ಹಿರಿಯ ಹಿಮ್ಮೇಳ ವಾದಕ ಕೃಷ್ಣಪ್ಪ ಕಿನ್ಯ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಗುವುದು. ಅಧ್ಯಾಪಕ ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣಗೈಯ್ಯುವರು. ಬಳಿಕ ನುರಿತ ಕಲಾವಿದರಿಂದ ಶಿವ ಭಕ್ತ ವೀರಮಣಿ ತಾಳಮದ್ದಳೆ ಜರಗಲಿದೆ.. ಭಾಗವತ ರತ್ನಾಕರ ಆಳ್ವ ದೇವಿಪುರ ತಲಪಾಡಿ, ಚೆಂಡೆ ಮದ್ದಳೆಯಲ್ಲಿ ಕೃಷ್ಣಪ್ಪ ಕಿನ್ಯ, ರಾಜಾರಾಮ ಬಲ್ಲಾಳ್ ಚಿಪ್ಪಾರು, ಶುಭ ಚರಣ ತಾಳ್ತಜೆ , ಚಕ್ರತಾಳ ಪ್ರಕಾಶ್ ಕಿನ್ಯ ಸಹಕರಿಸಲಿದ್ದಾರೆ.
ಪಾತ್ರವರ್ಗದಲ್ಲಿ ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೋ ಸಂಪಾಜೆ, ವಿಠಲ ಭಟ್ ಮೊಗಸಾಲೆ, ಸತೀಶ ಅಡಪ ಸಂಕಬೈಲು ಹಾಗೂ ನಾಗರಾಜ ಪದಕಣ್ಣಾಯ ಮೂಡಂಬೈಲು ರಂಜಿಸಲಿದ್ದಾರೆ ಎಂದು ಯಕ್ಷಬಳಗ ಪ್ರಕಟಣೆ ತಿಳಿಸಿದೆ.

