ತಿರುವನಂತಪುರಂ: ಮುಜಾಫರ್ ನಗರದಲ್ಲಿ ಶಿಕ್ಷಕರ ನಿರ್ದೇಶಾನುಸಾರ ಸಹಪಾಠಿಗಳಿಂದ ಥಳಿತಕ್ಕೊಳಗಾದ ವಿದ್ಯಾರ್ಥಿನಿಯ ಶಿಕ್ಷಣ ಕೈಗೆತ್ತಿಕೊಳ್ಳಲು ಕೇರಳ ಸಿದ್ದವಿರುವುದಾಗಿ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ತಿಳಿಸಿದ್ದಾರೆ. ಮಗುವಿನ ಪೋಷಕರು ಸಿದ್ಧರಿದ್ದರೆ ಕೇರಳ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಸಚಿವರು ತಿರುವನಂತಪುರದಲ್ಲಿ ಹೇಳಿದ್ದಾರೆ.
ನಿನ್ನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಚಿವರು ಪತ್ರ ಬರೆದು ತರಗತಿಯಲ್ಲಿ ವಿದ್ಯಾರ್ಥಿನಿಗೆ ಅವಮಾನ ಮಾಡಿದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಜಾತ್ಯತೀತ ವಿಚಾರಗಳನ್ನು ಅಳವಡಿಸಿಕೊಳ್ಳಲು ಕೇರಳ ಬದ್ಧವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಮಣಿಪುರದ ಗಲಭೆ ಪೀಡಿತ ಪ್ರದೇಶದ ಮಗುವಿಗೆ ಕೇರಳ ರಾಜ್ಯದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವ ಶಿವನ್‍ಕುಟ್ಟಿ ಹೇಳಿದರು.


