ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮವ್ವಲ್‍ನ ಬಾಡಿಗೆ ಕೊಠಡಿಯಲ್ಲಿ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿಷ ನೀಡಿ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೂರೂ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಳ್ಳಿಕ್ಕೆರೆ ಪರಯಂಗಾನ ನಿವಾಸಿ, ಮವ್ವಲ್‍ನ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ಶೆರೀಫ್ ಅರಯಾಲ್ ಎಂಬವರ ಪತ್ನಿ ಸರೀನಾ ಹಾಗೂ ಈಕೆಯ ಏಳು ಮತ್ತು ನಾಲ್ಕರ ಹರೆಯದ ಇಬ್ಬರು ಪುತ್ರರು ವಿಷ ಹೊಟ್ಟೆಯೊಳಗೆ ಸೇರ್ಪಡೆಗೊಂಡು ಆಸ್ಪತ್ರೆಯಲ್ಲಿರುವರು. ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಮೂರೂ ಮಂದಿಯನ್ನು ಕಣ್ಣೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಪತ್ನಿ ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ತಾನೂ ವಿಷ ಸೇವಿಸಿರುವುದಾಗಿ ಶೆರೀಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಯತ್ನ ಹಾಗೂ ಇಬ್ಬರು ಮಕ್ಕಳ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಸರೀನಾ ವಿರುದ್ಧ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿವಾಹ ವಿಚ್ಛೇದನಕ್ಕಾಗಿ ಸೆರೀನಾ ನಿರಂತರ ತನ್ನ ಮೇಲೆ ಒತ್ತಡ ಹೇರುತ್ತಿದ್ದು, ಇದಕ್ಕೆ ತಯಾರಾಗದಿರುವುದರಿಂದ ಕೃತ್ಯವೆಸಗಿರುವುದಾಗಿ ಶೆರೀಫ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನೊಂದೆಡೆ ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ ಆರೋಪದನ್ವಯ ಪತಿ ಶೆರೀಫ್ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




