ಕಾಸರಗೋಡು: ಜಿಲ್ಲೆಯಲ್ಲಿ ವ್ಯಾಪಾರಿ ಸಂಸ್ಥೆಗಳು, ಓಣಂ ಮಾರುಕಟ್ಟೆಗಳು, ವಿವಿಧ ಕಚೇರಿಗಳು, ಸಂಘ-ಸಂಸ್ಥೆಗಳು, ಕ್ಲಬ್‍ಗಳ ಮೂಲಕ ನಡೆಸುವ ಓಣಂ ಸಮಾರಂಭಗಳು, ಮೇಳಗಳಲ್ಲಿ ಹೊರಬೀಳುವ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸರ್ಕಾರ ಕಟ್ಟು ನಿಟ್ಟಿನ ಆದೇಶ ನೀಡಿದೆ.
ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ-ಅರೆ ಸರ್ಕಾರಿ ಮತ್ತು ಸರ್ಕಾರೇತರ ಕಛೇರಿಗಳು ಹಸಿರು ನಿಯಮಾವಳಿ ಅನುಸರಿಸಿಕೊಂಡು ಓಣಂ ಆಚರಣೆ, ಮೇಳ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕು. ಕಾರ್ಯಕ್ರಮಗಳ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಯ ಮೂಲಕ ಆಯಾ ದಿನಗಳಲ್ಲಿಯೇ ಸಂಗ್ರಹಿಸುವ ವ್ಯವಸ್ಥೆ ನಡೆಸಬೇಕು. ಸಾವಯವ ತ್ಯಾಜ್ಯವನ್ನು ಸಾವಯವ ಗೊಬ್ಬರ ಘಟಕದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಹ ನಿಷೇಧಿಸಲಾಗಿದೆ. ಬಳಸಿ ಬಿಸಾಡಬಹುದಾದ ಗಾಜು, ಇತರ ಪ್ಯಾಕಿಂಗ್ ಕವರ್‍ಗಳು ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಿರುವಂತೆ ಸೂಚಿಸಲಾಗಿದೆ. ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಕಚೇರಿ ಅಧಿಕಾರಿಗಳು, ಸಂಸ್ಥೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

