ಕಾಸರಗೋಡು: ಆರೋಗ್ಯ ಕ್ಷೇತ್ರದ ಸುಧಾರಣೆಗೆಎಡರಂಗ ಸರ್ಕಾರ ಹೆಚ್ಚಿನ ಪ್ರಾಧಾನ್ಯ ನೀಡುತ್ತಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಅವರು ಆಸ್ಪತ್ರೆ ವೈದ್ಯರ ಜತೆ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿ ಕಾಸರಗೋಡಿನ ಕಾಞಂಗಾಡ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೊದಲ ಹೆರಿಗೆ ನಡೆದಿರುವ ತಾಯಿ ಹಾಗೂ ಮಗುವಿನ ಆರೋಗ್ಯ ವಿಚಾರಿಸಿದರು.
ಜಿಲ್ಲೆಯಲ್ಲಿ ನರರೋಗ ತಜ್ಞರ ಎರಡು ಹುದ್ದೆಗಳನ್ನು ಸೃಷ್ಟಿಸಿ ಪರೀಕ್ಷಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾಞಂಗಾಡಿನ ಜಿಲ್ಲಾಸ್ಪತ್ರೆ ಅಲ್ಲದೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಾಕಾರಗೊಳಿಸಲಾಗಿದೆ. ಎಡರಂಗ ಸರ್ಕಾರದ ಕಾಲಾವಧಿಯಲ್ಲಿ ಆಸ್ಪತ್ರೆಗೆ 12 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರದ ಯೋಜನಾ ನಿಧಿ 9.41 ಕೋಟಿ ರೂ. ಬಳಸಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆಸ್ಪತ್ರೆಗೆ 3.33 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದ್ದು, 2.85 ಕೋಟಿ ವೆಚ್ಚದಲ್ಲಿ ಮಾಡ್ಯುಲರ್ ಆಪರೇಷನ್ ಥಿಯೇಟರ್ ಮತ್ತು ಕೇಂದ್ರೀಕೃತ ವೈದ್ಯಕೀಯ ಅನಿಲ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಮಾಡ್ಯುಲರ್ ಆಪರೇಷನ್ ಥಿಯೇಟರ್ ಸೇರಿದಂತೆ ಒಟ್ಟು ಮೂರು ಶಸ್ತ್ರಕ್ರಿಯಾ ಕೇಂದ್ರ, ಕೇಂದ್ರೀಕೃತ ವೈದ್ಯಕೀಯ ಅನಿಲ ವ್ಯವಸ್ಥೆ, 24 ಗಂಟೆಗಳ ಅಪಘಾತ, ಎಸ್.ಎನ್.ಸಿ.ಯು-ಐಸಿಯು, 90ಹಾಸಿಗೆಗಳುಳ್ಳ ಐಪಿ ಸೌಲಭ್ಯ, ಓ.ಪಿ ವಿಭಾಗ, ಫಾರ್ಮಸಿ ಮತ್ತು ಲ್ಯಾಬ್ ಸಜ್ಜುಗೊಳಿಸಲಾಗಿದೆ.


