ಬದಿಯಡ್ಕ: ಮೃದಂಗ ಮಾಂತ್ರಿಕ, ವಿದ್ವಾನ್ ಶತಾಯುಷಿ ಬಾಬು ರೈ ಅವರಿಗೆ ಬದಿಯಡ್ಕ ಸನಿಹದ ಬಳ್ಳಪದವಿನ "ನಾರಾಯಣೀಯಂ'ನಲ್ಲಿ ಗುರುವಂದನೆ ಕಾರ್ಯಕ್ರಮ ಜರುಗಿತು. ವಿದ್ವಾನ್ ಯೋಗೀಶ ಶರ್ಮ ಗೌರವಿಸಿದರು.
ಬ್ರಹ್ಮಶ್ರೀ ಆಲಂಗಾರು ರಾಧಾಕೃಷ್ಣ ಭಟ್ಟರ ಕಾರ್ಮಿಕತ್ವದಲ್ಲಿ ವೈದಿಕ ವಿಧಿಯಂತೆ ವಿದ್ವಾನ್ ಯೋಗೀಶ ಶರ್ಮ ಅವರು ಬಾಬು ರೈ ಅವರ ಪಾದ ತೊಳೆದು, ನೇಂದ್ರಕಾಯಿ, ಎಳನೀರು ಗೊನೆ, ಫಲಪುಷ್ಪ ಇರಿಸಿ ನಮನ ಸಲ್ಲಿಸಿದರು. ಬಳಿಕ ನಾರಾಯಣೀಯಂ ನ ಅಂತಿಮ ಶ್ಲೋಕ ಸಹಿತ ಶ್ಲೋಕ ಪಾರಾಯಣದ ಭಕ್ತಿಸಾಂದ್ರತೆಯ ವಾತಾವರಣದಲ್ಲಿ ಪಾದಪೂಜೆ ನಡೆಸಲಾಯಿತು. ಜತೆಗೆ ಶಾಲು, ಸ್ಮರಣಿಕೆ, ಗೌರವಧನ, ಧಾನ್ಯ, ಫಲಪುಷ್ಪಗಳ ಗುರುಪೂಜೆ ಸಮರ್ಪಿಸಲಾಯಿತು.
ಈ ಸಂದರ್ಭ ಬಾಬು ರೈ ಅವರು ಮಾತನಾಡಿ ತಾನು ಮೈಸೂರು ಆಸ್ಥಾನದಲ್ಲಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಮೃದಂಗವನ್ನಿಟ್ಟು ತಾಜಾ ಮೈಸೂರು ಬಾಣಿಯನ್ನು ನುಡಿಸಿದರು. ಸ್ವರಾಕ್ಷರಗಳಿಂದ ಬಾಯ್ತಾಳವನ್ನೂ ಹೇಳಿದರು. ಶತಮಾನೋತ್ತರ ಒಂದನೇ ದಿನವೇ ಮತ್ತೊಮ್ಮೆ ಮೃದಂಗ ಪಾಠ ಮಾಡುವ ಮೂಲಕ ಸಭಿಕರಲ್ಲಿ ಚ್ಛರಿ ತಂದುಕೊಟ್ಟಿದ್ದರು. ನನಗಿದು ನೂರೊಂದನೇ ವಯಸ್ಸಿನ ಪಯಣದ ಮೊದಲ ದಿನ. ಈ ದಿನವೇ ನನ್ನನ್ನು ದೇವತ್ವಕ್ಕೇರಿಸಿ ವೈದಿಕ ಅನುಷ್ಠಾನದ ಉಪಕ್ರಮಗಳಿಂದ ಆರಾಧಿಸಿ, ಪಾದಪೂಜೆಯೊಂದಿಗೆ ಗುರುಪೂಜೆ ಸಲ್ಲಿಸಿದ್ದೀರಿ. ಇದು ಜನ್ಮ ಸುಕೃತ ಫಲ. ಇದೆಲ್ಲವೂ ತಾಯಿ ಅನ್ನಪೂರ್ಣೆಗೆ ಸಲ್ಲಲಿ" ಎಂದು ತಿಳಿಸಿದರು.


