ಮುಳ್ಳೇರಿಯ: ಕೇರಳ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇರಳ-ಕರ್ನಾಟಕ ಗಡಿಪ್ರದೇಶದ ಆದೂರು ಸನಿಹದ ಗಾಳಿಮುಖದ ಮುಹಮ್ಮದ್ ಶಿಂಷಾರ್ ಕುಟುಂಬ ಭಾರತ ಪ್ರವಾಸದ ತಯಾರಿ ನಡೆಸಿದೆ. ಮಹಮ್ಮದ್ ಶಿಂಷಾರ್ ಅವರ ಪತ್ನಿ ಫಾತಿಮತ್ ಅಶ್ಪಾನ, ಒಂದು ವರ್ಷ ಪ್ರಾಯದ ಪುತ್ರ ಸೈನ್ ಮತ್ತು ಸಹೋದರಿ ಖದೀಜಾ ಶಸಾ ಭಾರತ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಆ. 20ರ ಬೆಳಗ್ಗೆ 11.30ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪ್ರದೇಶದಲ್ಲಿ ಎನ್.ಎ.ನೆಲ್ಲಿಕುನ್ನು ಮಹಮ್ಮದ್ ಶಿಂಷಾರ್ ಕುಟುಂಬದ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ. ತಮ್ಮ ಮಹೇಂದ್ರ ಥಾರ್ ವಾಹನದಲ್ಲಿ ಕಾಸರಗೋಡಿನಿಂದ ಮಂಗಳೂರು ಮೂಲಕ ಗೋವಾ, ಮಹಾರಾಷ್ಟ್ರ, ಗುಜರಾತ್ ಮೂಲಕ ಉತ್ತರ ಭಾರತ ತೆರಳಲಿದ್ದಾರೆ.
ಕೇರಳದ ಸಂಸ್ಕøತಿ, ಪ್ರಾಕೃತಿಕ ಸೌಂದರ್ಯ ಮತ್ತು ಪ್ರವಾಸೋದ್ಯಮ ಪ್ರದೇಶಗಳನ್ನು ದೇಶದ ವಿವಿಧ ರಾಜ್ಯಗಳ ಜನತೆಗೆ ಪರಿಚಯಿಸಿ ಕೇರಳದತ್ತ ಆಕರ್ಷಿಸುವುದು ಇವರ ಪ್ರವಾಸದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಕಿರುಹೊತ್ತಗೆ, ಬ್ರೋಶರ್‍ಗಳನ್ನೂ ಕೊಂಡೊಯ್ಯಲಿದ್ದಾರೆ.
ಸುಳ್ಯ ಹಾಗೂ ಕಾಸರಗೋಡಿನಲ್ಲಿ ಪಾಲುದಾರಿಕೆಯೊಂದಿಗೆ ಬಟ್ಟೆ ವ್ಯಾಪಾರಿಯಾಗಿರುವ ಮುಹಮ್ಮದ್ ಶಿಂಷಾರ್, ರಾಷ್ಟ್ರಪ್ರವಾಸಕ್ಕಾಗಿ ಸುಮಾರು ನಾಲ್ಕು ತಿಂಗಳನ್ನು ಮೀಸಲಿರಿಸಿದ್ದಾರೆ. ಹೋಟೆಲ್‍ಗಳಲ್ಲಿ ವಾಸ್ತವ್ಯ ಹೂಡುವುದಿದ್ದರೂ, ಆಹಾರ ಸ್ವಯಂ ತಯಾರಿಸಿಕೊಳ್ಳುವ ಯೋಜನೆ ಇವರದ್ದಾಗಿದೆ. ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಕೇರಳಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಸಾಹಸಕ್ಕೆ ಮುಹಮ್ಮದ್ ಶಿಂಷಾರ್ ತಯಾರಾಗಿದ್ದಾರೆ.
ಅಭಿಮತ:
ಸರ್ಕಾರದ ಅನುಮತಿ ಲಭಿಸಿ, ಹವಾಮಾನ ಸೂಕ್ತವಾಗಿದ್ದಲ್ಲಿ, ಭೂತಾನ್, ನೇಪಾಳಕ್ಕೂ ಪ್ರವಾಸ ಕೈಗೊಳ್ಳಲಾಗುವುದು.ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಈ ಬಗ್ಗೆ ಮನವರಿಕೆ ಮಾಡಲಾಗಿದ್ದು, ಎಲ್ಲಾ ರೀತಿಯ ಸಹಕಾರ ಒದಗಿಸುವ ಭರವಸೆ ನೀಡಿದ್ದಾರೆ. ಯಾವುದಾದರೂ ಪ್ರವಾಸ ಕೈಗೊಳ್ಳಬೇಕೆಂಬ ಹಂಬಲ ತನ್ನೊಳಗಿತ್ತು. ತನ್ನ ಪ್ರವಾಸದಿಂದ ರಾಜ್ಯಕ್ಕೆ ಕಿಂಚಿತ್ ಅನುಕೂಲವಾಗಲಿ ಎಂಬುದು ಯೋಜನೆ ಉದ್ದೇಶ.
ಮುಹಮ್ಮದ್ ಶಿಂಷಾರ್, ಗಾಳಿಮುಖ
ಭಾರತ ಪ್ರವಾಸ ಆಯೋಜಕ

