HEALTH TIPS

ಮಲಯಾಳಿ ಶಿಕ್ಷಕಿಗೆ ವರ್ಗಾವಣೆಯ ಆದೇಶ: ಅಡೂರಿನ ಕನ್ನಡಿಗ ಮಕ್ಕಳ ವಿಜಯೋತ್ಸವ

               ಮುಳ್ಳೇರಿಯ:  ಅಡೂರಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಪಾಠ ಮಾಡಲು ಕನ್ನಡ ತಿಳಿಯದ ಮಲಯಾಳ ಶಿಕ್ಷಕಿಯನ್ನು ನೇಮಕ ಮಾಡಿದ ವಿವಾದ ಇದೀಗ ಅಂತ್ಯಗೊಂಡಿದೆ. ವಿಚಾರಣೆ ನಡಸಿದ ಕೇರಳ ಹೈಕೋರ್ಟ್ ಸೋಮವಾರ ನೀಡಿದ ತೀರ್ಪಿನಲ್ಲಿ ಮಲಯಾಳ ಶಿಕ್ಷಕಿಗೆ ಕನ್ನಡ ಮಕ್ಕಳಿಗೆ ಪಾಠ ಮಾಡುವಷ್ಟು ಪ್ರಾವಿಣ್ಯತೆ ಇಲ್ಲದ ಕಾರಣ ಅವರನ್ನು ವರ್ಗಾವಣೆ ಮಾಡಬೇಕೆಂದು ಆದೇಶ ನೀಡಿದೆ. 

          ಈ ಮೂಲಕವಾಗಿ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಬೇಕೆಂಬ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸುಮಾರು 250ಕ್ಕೂ ಹೆಚ್ಚಿನ ಕನ್ನಡ ಮಕ್ಕಳ ಬಯಕೆಗೆ ಕೇರಳದ ಹೈಕೋರ್ಟ್ ಸ್ಪಂದಿಸಿದೆ. ಇತ್ತೀಚೆಗೆ ಅಡೂರು ಸರ್ಕಾರಿ ಶಾಲೆಗೆ ಬಂದು ಮಲಯಾಳ ಶಿಕ್ಷಕಿಯ ಕನ್ನಡ ಪಾಠದ ಬಗ್ಗೆ ತನಿಖೆ ನಡೆಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೈಕೋರ್ಟಿಗೆ ನೀಡಿದ ವರದಿಯ ಪ್ರಕಾರ ಈ ತೀರ್ಪು ಹೊರಬಿದ್ದಿದೆ. ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಕ್ಕಳ ಸಮಾಜ ವಿಜ್ಞಾನ ಪಠ್ಯಕ್ಕೆ ಕನ್ನಡ ತಿಳಿದಿರುವ ಶಿಕ್ಷಕಿಯನ್ನು ಶೀಘ್ರವಾಗಿ ನೇಮಿಸಬೇಕೆಂದು ನ್ಯಾಯಾಲಯ ಆದೇಶ ನೀಡಿದೆ. ಮಲಯಾಳಿ ಶಿಕ್ಷಕಿಯ ನೇಮಕಾತಿಯ ವಿರುದ್ಧ ಅಡೂರಿನ ಕನ್ನಡ ವಿದ್ಯಾರ್ಥಿಗಳ ಪೋಷಕರು ಅಡೂರಿನಲ್ಲಿ ಕನ್ನಡ ಹೋರಾಟ ಸಮಿತಿಯನ್ನು ರಚಿಸಿಕೊಂಡು, ಅದರ ನೇತೃತ್ವದಲ್ಲಿ ಸಂಘಟಿತರಾಗಿ ಹೋರಾಟ ನಡೆಸಿದ್ದರು. ಈ ಹೋರಾಟಕ್ಕೆ ಜಿಲ್ಲೆಯ ಅನೇಕ ಮಂದಿ ಕನ್ನಡಾಭಿಮಾನಿಗಳು ಸಕಾಲಿಕ ಸಹಕಾರ ನೀಡಿದ್ದರು. ಶಾಲೆಯ ಕನ್ನಡ ಮಕ್ಕಳೂ ಕೂಡಾ ಮಲಯಾಳ ಶಿಕ್ಷಕಿಯ ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಈ ಬಾರಿಯ ಓಣಂ ಪರೀಕ್ಷೆಗೆ ಮಕ್ಕಳು ಸಮಾಜ ವಿಜ್ಞಾನ ಪಾಠ ಕೇಳದೆ, ಸ್ವಯಂ ಅಧ್ಯಯನ ನಡೆಸಿ ಪರೀಕ್ಷೆ ಬರೆದಿದ್ದರು. 

           2023 ಜೂನ್ 3ರಂದು ನೇಮಕಾತಿ ಆದೇಶ ಪಡೆದು ಶಾಲೆಗೆ ಆಗಮಿಸಿದ್ದ ಮಲಯಾಳ ಶಿಕ್ಷಕಿಯನ್ನು ಕನ್ನಡ ಪೋಷಕರು ತಡೆದು ವಾಪಾಸು ಕಳುಹಿಸಿದ್ದರು. ಆದರೆ ಮರಳಿದ ಮಲಯಾಳಿ ಶಿಕ್ಷಕಿಯು ಆದೂರು ಪೊಲೀಸರ ಭದ್ರತೆಯೊಂದಿಗೆ ಮತ್ತೆ ಶಾಲೆಗೆ ಬಂದರು. ಇದನ್ನು ತಿಳಿದು ಶಾಲೆಯತ್ತ ಆಗಮಿಸಿದ ಕನ್ನಡಿಗರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಮಲಯಾಳಿ ಶಿಕ್ಷಕಿ ಪೊಲೀಸರೊಂದಿಗೆ ಹಿಂತಿರುಗಬೇಕಾಯಿತು. ಜೂ.16ರಂದು ಏಕಾಏಕಿಯಾಗಿ ಶಾಲೆಗೆ ಬಂದ ಮಲಯಾಳ ಶಿಕ್ಷಕಿಯು ನೇಮಕಾತಿ ಆದೇಶವನ್ನು ಮುಖ್ಯ ಶಿಕ್ಷಕರಿಗೆ ನೀಡಿ ನೇಮಕಗೊಂಡರು. ಮಲಯಾಳಿ ಶಿಕ್ಷಕಿಗೆ ನೇಮಕಾತಿ ವಿಚಾರದಲ್ಲಿ ನಿಧಾನಗತಿ ತೋರ್ಪಡಿಸಿದ್ದಾರೆ ಹಾಗೂ ಶಿಕ್ಷಕಿಗೆ ಭದ್ರತೆ ನೀಡಿಲ್ಲ ಎಂಬ ಆರೋಪದಡಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕರನ್ನು ವಯನಾಡಿ ಸರ್ಕಾರಿ ಶಾಲೆಯೊಂದಕ್ಕೆ ವರ್ಗಾವಣೆ ಮಾಡಲಾಯಿತು. ಈ ಎಲ್ಲಾ ವಿದ್ಯಾಮಾನಗಳ ನಡುವೆ ಅಡೂರಿನ ಕನ್ನಡ ಹೋರಾಟ ಸಮಿತಿಯು ವಿವಾದಿತ ಶಿಕ್ಷಕಿಯ ವರ್ಗಾವಣೆಗೆ ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯವು ವಿದ್ಯಾರ್ಥಿಗಳ ಪರವಾಗಿ ತೀರ್ಪು ನೀಡಿ, ಮಲಯಾಳ ಶಿಕ್ಷಕಿಯನ್ನು ಕೂಡಲೇ ಶಾಲೆಯಿಂದ ವರ್ಗಾವಣೆ ಮಾಡಿ, ಕನ್ನಡ ಬಲ್ಲ ಶಿಕ್ಷಕಿಯನ್ನು ನೇಮಿಸುವಂತೆ ಆದೇಶಿಸಿದೆ. ಆ.24ರಿಂದ ಸೆ.3ರ ತನಕ ಶಾಲೆಗೆ ಓಣಂ ರಜೆ ಇರುವುದರಿಂದ, ಸೆ.4ರಂದು ಶಾಲೆಗೆ ಬರುವಾಗ ಸಮಾಜ ವಿಜ್ಞಾನ ಪಠ್ಯಕ್ಕೆ ಕನ್ನಡ ಬಲ್ಲ ಉತ್ತಮ ಶಿಕ್ಷಕರನ್ನು ನೇಮಕ ಮಾಡಬಹುದೆಂಬ ನಿರೀಕ್ಷೆಯನ್ನು ಕನ್ನಡ ವಿದ್ಯಾರ್ಥಿಗಳು ವ್ಯಕ್ತ ಪಡಿಸಿದ್ದಾರೆ. ವಿವಾದ ಬಗೆಹರಿದ ಹಿನ್ನೆಲೆಯಲ್ಲಿ ಗುರುವಾರ ಅಡೂರು ಗ್ರಾಮ ಪಂಚಾಯಿತಿನ ಪರಿಸರದಿಂದ ಕನ್ನಡಿಗರ ವಿಜಯೋತ್ಸವ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಡೂರಿನ ಕನ್ನಡಿಗ ಪೋಷಕರು, ಕನ್ನಡ ಅಭಿಮಾನಿಗಳು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಹಿತ ನೂರಾರು ಮಂದಿ ಭಾಗವಹಿಸಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries