ಹಣ್ಣುಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಹೊರಗಿನ ಜಂಕ್ ಫುಡ್, ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸುವುದರ ಬದಲಾಗಿ ಹಣ್ಣುಗಳನ್ನು ತಿಂದರೆ ಆರೋಗ್ಯ ತುಂಬಾನೇ ಚೆನ್ನಾಗಿರುತ್ತೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ನಿಮಗೊತ್ತಾ? ಮಧುಮೇಹಿಗಳು ಕೆಲವೊಂದು ಹಣ್ಣುಗಳನ್ನು ತಿನ್ನಲೇಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಸಾಮಾನ್ಯವಾಗಿ ಮಧುಮೇಹಿಗಳು ಸಕ್ಕರೆಯುಕ್ತ ಪದಾರ್ಥಗಳನ್ನು ತಿನ್ನಲೇಬಾರದು. ಆದರೆ ಹಣ್ಣುಗಳನ್ನು ತಿನ್ನೋದ್ರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಸಕ್ಕರೆ ಕಾಯಿಲೆ ಇರುವವರು ಕೆಲವೊಂದು ಹಣ್ಣುಗಳನ್ನು ತಿನ್ನಲೇಬಾರದಂತೆ. ಅಷ್ಟಕ್ಕೂ ಮಧುಮೇಹಿಗಳು ಯಾವ ಹಣ್ಣುಗಳನ್ನು ತಿನ್ನಲೇಬಾರದು ಅನ್ನೋದನ್ನು ತಿಳಿಯೋಣ.ಮಧುಮೇಹಿಗಳಿಗೆ ಕೆಲವೊಂದು ಹಣ್ಣುಗಳು ಅಪಾಯಕಾರಿ ಆಗ್ಬಹುದಂತೆ. ಇದರಿಂದ ಸಕ್ಕರೆ ಕಾಯಿಲೆಯ ಅಪಾಯ ಮತ್ತಷ್ಟು ಹೆಚ್ಚಾಗಲಿದೆ. ನೀವು ಈ ಹಣ್ಣುಗಳನ್ನು ಸೇವಿಸಿದ ತಕ್ಷಣವೇ ರಕ್ತದ ಸಕ್ಕರೆಯು 200 mg/dL ಅನ್ನು ಮೀರಿ ಹೋಗುತ್ತಂತೆ. ಆ ಹಣ್ಣುಗಳು ಯಾವುದು ಅಂತ ನೋಡೋದಾದ್ರೆ.
ಬಾಳೆಹಣ್ಣು
ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲರೂ ಇಷ್ಟ ಪಡುವ ಹಣ್ಣಾಗಿದೆ. ಇದು ಹೊಟ್ಟೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ತಿನ್ನುವುದರಿಂದ ನಾರಿನಂಶ, ಪ್ರೊಟೀನ್, ವಿಟಮಿನ್, ಮ್ಯಾಂಗನೀಸ್, ಪೊಟ್ಯಾಶಿಯಂ ಮುಂತಾದ ಹಲವು ಪೋಷಕಾಂಶಗಳು ಸಿಗುತ್ತವೆ. ಒಂದು ಅಧ್ಯಯನದ ಪ್ರಕಾರ ಮಾಗಿದ ಬಾಳೆಹಣ್ಣು ತಿನ್ನುವುದು ಅಧಿಕ ರಕ್ತದಲ್ಲಿನ ಸಕ್ಕರೆಗೆ ಕಾರಣವಾಗಬಹುದು ಅಂತ ಹೇಳಲಾಗುತ್ತದೆ. ಏಕೆಂದರೆ ಇದ್ರಲ್ಲಿ ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.
ಕಲ್ಲಂಗಡಿ ಹಣ್ಣು
ಬೇಸಿಗೆ ಕಾಲದಲ್ಲಿ ಜನ ಅತೀ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸುತ್ತಾರೆ. ಯಾಕಂದ್ರೆ ಇದು ನಮ್ಮನ್ನು ಬೇಸಿಗೆಯಲ್ಲಿ ಡಿಹೈಡ್ರೇಟ್ ಮಾಡೋದಕ್ಕೆ ಸಹಾಯ ಮಾಡುತ್ತದೆ. ಆದರೆ ಮಧುಮೇಹಿಗಳ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ. ಯಾಕಂದ್ರೆ ಇದರ GI ಮೌಲ್ಯವು ಸುಮಾರು 72 ಆಗಿದೆ. ಇದು ಮಧುಮೇಹಿಗಳಿಗೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ.
ಅನಾನಸ್ ಹಣ್ಣು
ಮಧುಮೇಹ ರೋಗಿಗಳು ಅನಾನಸ್ ಹಣ್ಣನ್ನು ಮಿತವಾಗಿ ತಿನ್ನಬೇಕು. ವಿಟಮಿನ್ ಸಿ ಸಮೃದ್ಧವಾಗಿರುವ ಈ ರುಚಿಕರವಾದ ಹಣ್ಣನ್ನು ಅತಿಯಾಗಿ ಸೇವಿಸಿದಾಗ ರಕ್ತದಲ್ಲಿನ ಸಕ್ಕರೆಯನ್ನು ಏಕಾಏಕಿ ಹೆಚ್ಚಿಸುತ್ತದೆ. ಇದು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ರಕ್ತದಲ್ಲಿ ತ್ವರಿತವಾಗಿ ಕರಗುತ್ತದೆ. ಮತ್ತು ಗ್ಲೂಕೋಸ್ ಅನ್ನು ಹೆಚ್ಚಿಸುತ್ತದೆ.
ಒಣ ಖರ್ಜೂರ
ಖರ್ಜೂರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ. ಮತ್ತು ಒಣಗಿದ ನಂತರ ಇದು ಮತ್ತಷ್ಟು ಹೆಚ್ಚಾಗುತ್ತದೆ. ಇದು ಎಷ್ಟರಮಟ್ಟಿಗಿದೆಯೆಂದರೆ ಅದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಕೂಡ ಸಕ್ಕರೆಗೆ ಹೋಲಿಸಿದ್ರೆ ಕಡಿಮೆಯಾಗಿರುತ್ತದೆ. ಅದಕ್ಕಾಗಿಯೇ ಮಧುಮೇಹಿಗಳು ಒಣ ಖರ್ಜೂರವನ್ನು ತಿನ್ನಬಾರದು.
ಮಾವಿನ ಹಣ್ಣು
ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಆದರೆ ಮಧುಮೇಹ ರೋಗಿಗಳಿಗೆ ಇದು ಉತ್ತಮ ಹಣ್ಣು ಅಲ್ಲ. ಇದು ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಬಹಳ ಎಚ್ಚರಿಕೆಯಿಂದ ತಿನ್ನಬೇಕು. ಹೆಚ್ಚಿನ ಜಿಐ ಮೌಲ್ಯದ ಕಾರಣ ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.