HEALTH TIPS

ಯುವಕರ ಸ್ಫೂರ್ತಿಗೆ ಆತ್ಮಚರಿತ್ರೆ: ಶೀಘ್ರ ಬಿಡುಗಡೆ- ಇಸ್ರೊ ಅಧ್ಯಕ್ಷ ಸೋಮನಾಥ್

               ತಿರುವನಂತಪುರ: ಚಂದ್ರನ ಅಂಗಳಕ್ಕೆ ಉಪಗ್ರಹದ ಯಶಸ್ವಿ ಉಡಾವಣೆ, ಸೂರ್ಯನತ್ತ ಸಂಶೋಧನೆಗೆ ಉಪಗ್ರಹ ಉಡಾವಣೆ ಮತ್ತು ಭಾರತೀಯರನ್ನು ಅಂತರಿಕ್ಷಕ್ಕೆ ಕಳುಹಿಸಲು ತಯಾರಿ. ಹೀಗೆ ತಮ್ಮ ಕೆಲಸದಲ್ಲಿ ಅತ್ಯಂತ ಸಕ್ರಿಯರಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಇದೀಗ ತಮ್ಮ ಆತ್ಮಚರಿತ್ರೆ ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ.

             ಹಾಸ್ಟೆಲ್ ವೆಚ್ಚ ಕಡಿತಗೊಳಿಸಲು ಸಾಧಾರಣ ಕೊಠಡಿಯಲ್ಲಿ ವಾಸ, ಸಾರಿಗೆ ವೆಚ್ಚ ಉಳಿಸಲು ಹಳೆಯ ಸೈಕಲ್ ಬಳಕೆ ಹೀಗೆ ತಮ್ಮ ಜೀವನದ ಕಷ್ಟದ ದಿನಗಳನ್ನು ಇದರಲ್ಲಿ ಅವರು ಮೆಲುಕು ಹಾಕಿದ್ದಾರೆ. ಮಲಯಾಳಂ ಭಾಷೆಯಲ್ಲಿ ಈ ಆತ್ಮಚರಿತ್ರೆ ಬಿಡುಗಡೆಯಾಗಲಿದೆ.

             ಮಲಯಾಳಂನಲ್ಲಿ 'ನಿಲಾವು ಕುಡಿಚ್ಚ ಸಿಂಹಗಳ್''ಎಂಬ ಶೀರ್ಷಿಕೆಯ ಆತ್ಮಚರಿತ್ರೆಯು ಪ್ರೇರಣೆಯ ಕಥೆಯಾಗಲಿದೆ. ಕಷ್ಟದ ಸಂದರ್ಭದಲ್ಲಿ ಕಠಿಣ ಪರಿಶ್ರಮದ ಶಕ್ತಿಯನ್ನು ಕೇಂದ್ರೀಕರಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

               ಚಂದ್ರಯಾನದ ಯಶಸ್ಸಿನ ನಂತರ ಮತ್ತು ಆದಿತ್ಯ-ಎಲ್1 ಸೋಲಾರ್ ಮಿಷನ್ ಹಾಗೂ ಗಗನಯಾನ ಪರೀಕ್ಷಾರ್ಥ ಉಡಾವಣೆ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಉಡಾವಣೆಗಳ ನಡುವೆ ಸೋಮನಾಥ್ ತಮ್ಮ ಜೀವನದ ಕಥೆಯನ್ನು ವಿವರಿಸಲು ಸಮಯ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

             ಕೇರಳ ಮೂಲದ ಲಿಪಿ ಪಬ್ಲಿಕೇಷನ್ಸ್‌ನಿಂದ ಪ್ರಕಟವಾಗುತ್ತಿರುವ ಈ ಪುಸ್ತಕವು ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ.

                  'ಇಂಜಿನಿಯರಿಂಗ್ ಅಥವಾ ಬಿಎಸ್ಸಿಗೆ ಸೇರಬೇಕೇ ಎಂದು ತಿಳಿಯದ ಒಬ್ಬ ಸಾಮಾನ್ಯ ಹಳ್ಳಿಯ ಯುವಕನ ಕಥೆ. ಅವನ ಇಕ್ಕಟ್ಟುಗಳು, ಜೀವನದಲ್ಲಿ ಅವನು ಮಾಡಿದ ಸರಿಯಾದ ನಿರ್ಧಾರಗಳು ಮತ್ತು ಭಾರತದಂತಹ ದೇಶದಲ್ಲಿ ಅವನು ಪಡೆದ ಅವಕಾಶಗಳ ಕುರಿತದ್ದಾಗಿದೆ' ಎಂದು ಸೋಮನಾಥ್ ಹೇಳಿದ್ದಾರೆ.

                'ಈ ಪುಸ್ತಕವು ನನ್ನ ಜೀವನದ ಕಥೆಯನ್ನು ಜನರಿಗೆ ತಿಳಿಸುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ಜೀವನದಲ್ಲಿ ಹಲವು ಸಮಸ್ಯೆಗಳ ನಡುವೆಯೂ ಯುವಕರು ತಮ್ಮ ಕನಸುಗಳನ್ನು ಬೆನ್ನಟ್ಟಲು ಪ್ರೇರೇಪಿಸುವುದು ಇದರ ಏಕೈಕ ಉದ್ದೇಶವಾಗಿದೆ'ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ.

ತಮ್ಮ ಗ್ರಾಮೀಣ ಹಿನ್ನೆಲೆಯನ್ನು ನೆನಪಿಸಿಕೊಂಡ ಅವರು, ದೇಶವು ತಮ್ಮ ಮುಂದೆ ಅಪಾರ ಅವಕಾಶಗಳನ್ನು ತೆರೆದಿಟ್ಟಿತ್ತು ಎಂದು ಹೇಳಿದರು. ಆತ್ಮಚರಿತ್ರೆಯು ಇದನ್ನು ಹೈಲೈಟ್ ಮಾಡುವ ಪ್ರಯತ್ನವಾಗಿದೆ ಎಂದಿದ್ದಾರೆ.

               ಚಂದ್ರಯಾನ-3ರ ಐತಿಹಾಸಿಕ ಯಶಸ್ಸು ಶೀಘ್ರದಲ್ಲೇ ಪುಸ್ತಕವನ್ನು ಹೊರತರಲು ಪ್ರೇರೇಪಣೆ ನೀಡಿತು ಎಂದು ಅವರು ಹೇಳಿದ್ದಾರೆ.

                 'ಚಂದ್ರಯಾನವು ಸಮಾಜದ ಮೇಲೆ ತುಂಬಾ ಪ್ರಭಾವ ಬೀರಿದೆ. ನಾವು ಸುತ್ತಲೂ ನೋಡಿದಾಗ, ಅದರ ಯಶಸ್ಸಿನಿಂದ ಎಷ್ಟು ಜನರು, ವಿಶೇಷವಾಗಿ ಮಕ್ಕಳು ಸ್ಫೂರ್ತಿ ಪಡೆದಿದ್ದಾರೆಂದು ಗೊತ್ತಾಗುತ್ತದೆ. ಭಾರತ ಮತ್ತು ಭಾರತೀಯರು ಸಹ ಅಂತಹ ಮಹತ್ತರವಾದ ಕೆಲಸಗಳನ್ನು ಮಾಡಬಹುದು ಎಂಬುದನ್ನು ಜನರು ಅರ್ಥಮಾಡಿಕೊಂಡರು'ಎಂದು ಅವರು ವಿವರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries