ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವ ಅ. 30-31 ರಂದು ಕುಂಜತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಈ ಸಂಬಂಧಿ ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಸಂಬಂಧಪಟ್ಟವರು ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಂಜೇಶ್ವರ ಉಪ ಜಿಲ್ಲಾ ಮಟ್ಟದ 112 ಶಾಲೆಗಳ ಸುಮಾರು 3000 ದಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವುದಾಗಿ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ ಹಾಗೂ ಪ್ರಾಂಶುಪಾಲ ಶಿಶುಪಾಲನ್ ಜಂಟಿಯಾಗಿ ಮಾಹಿತಿ ನೀಡಿದರು. ಮೊದಲ ದಿನದ ವಿಜ್ಞಾನ ಮೇಳವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಎರಡನೇ ದಿನದ ವಿಜ್ಞಾನ ಮೇಳವನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣ ಉದ್ಘಾಟಿಸಲಿದ್ದಾರೆ.
ಮೊದಲ ದಿನ ವಿಜ್ಞಾನ, ಗಣಿತ ಹಾಗೂ ಐಟಿ ವಿಭಾಗದ ವಿಜ್ಞಾನ ಮೇಳ ನಡೆಯಲಿದೆ. ಎರಡನೇ ದಿನ ಸಮಾಜ ವಿಜ್ಞಾನ ಮತ್ತು ವೃತ್ತಿ ಪರಿಚಯದ ಮೇಳ ನಡೆಯಲಿದೆ.
ಈ ಸಂದರ್ಭ ವಿಜ್ಞಾನೋತ್ಸವದ ಆಹ್ವಾನ ಪತ್ರಿಕೆಯನ್ನು ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಖಾದರ್ ಹನೀಫ, ಮಂಜೇಶ್ವರ ಉಪಜಿಲ್ಲಾ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ. ಎಸ್.ಎಚ್., ಶ್ಯಾಮ ಭಟ್, ಶಾಲಾ ಶಿಕ್ಷಕಿಯರಾದ ಅಮಿತಾ, ಅನಿತಾ, ಸರಿತಾ, ಶಿಕ್ಷಕ ದಿವಾಕರ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

.jpg)
