ಮಾಲೆ: ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ, ಚೀನಾ ಪರ ಒಲವು ಹೊಂದಿರುವ ಮೊಹಮ್ಮದ್ ಮುಯಿಝು, ಕಾರ್ಯತಂತ್ರದ ಭಾಗವಾಗಿ ಮಹತ್ವ ಪಡೆದಿರುವ ಹವಳ ದ್ವೀಪ ರಾಷ್ಟ್ರದಲ್ಲಿ ನೆಲೆಗೊಂಡಿರುವ ಭಾರತೀಯ ಸೇನಾ ಪಡೆಗಳನ್ನು ವಾಪಸ್ ಕಳುಹಿಸುವ ಸಂಕಲ್ಪ ಮಾಡಿದ್ದಾರೆ.
'ಮಾಲ್ಡೀವ್ಸ್‌ನಲ್ಲಿ ನೆಲೆನಿಂತಿರುವ ವಿದೇಶಿ ಮಿಲಿಟರಿ ಪಡೆಗಳನ್ನು ನಾವು ಕಾನೂನು ಪ್ರಕಾರ ಹಿಂದಕ್ಕೆ ಕಳುಹಿಸುತ್ತೇವೆ. ಖಚಿತವಾಗಿಯೂ ನಾವು ಅದನ್ನು ಮಾಡುತ್ತೇವೆ' ಎಂದು ರಾಜಧಾನಿ ಮಾಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮುಯಿಝು ಅವರು ಭಾರತದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಹೇಳಿದರು.
'ಇಲ್ಲಿಗೆ ಸೇನಾ ಪಡೆಗಳನ್ನು ತಂದವರು ಅವುಗಳನ್ನು ವಾಪಸ್ ಕಳುಹಿಸಲು ಬಯಸುವುದಿಲ್ಲ. ಆದರೆ, ಮಾಲ್ಡೀವ್ಸ್ ಜನರು ವಾಪಸ್ ಕಳುಹಿಸಲು ನಿರ್ಧರಿಸಿದ್ದಾರೆ' ಎಂದು ಅವರು ಹೇಳಿದರು.
ಮಾಲ್ಡೀವ್ಸ್‌ನಲ್ಲಿ ಸೇನಾ ಪಡೆಯನ್ನು ಹೊಂದಿರುವ ಏಕೈಕ ವಿದೇಶವೆಂದರೆ ಅದು ಭಾರತ. ತನ್ನ ವಿಶಾಲ ಕಡಲ ಪ್ರದೇಶದಲ್ಲಿ ಗಸ್ತು ನಡೆಸಲು ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿದ ನಾಲ್ಕು ಬೇಹುಗಾರಿಕಾ ವಿಮಾನಗಳನ್ನು ನಿರ್ವಹಿಸಲು ಭದ್ರತಾ ಸಿಬ್ಬಂದಿಯ ಸಣ್ಣ ಘಟಕವನ್ನು ಭಾರತವು ಈ ದ್ವೀಪ ರಾಷ್ಟ್ರದಲ್ಲಿ ನಿಯೋಜಿಸಿದೆ. ಮುಯಿಝು ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಈ ವಿಚಾರವಾಗಿ 'ಇಂಡಿಯಾ-ಔಟ್' ವಿಷಯ ಬಳಸಿಕೊಂಡಿದ್ದರು.
ಮುಯಿಝು ತಮ್ಮನ್ನು ಚೀನಾ ಪರ ಒಲವು ಹೊಂದಿರುವ ನಾಯಕ ಎನ್ನುವ ಮಾಧ್ಯಮ ವರದಿಗಳನ್ನು ಅಲ್ಲಗಳೆದಿದ್ದು, 'ನಾನು ಮಾಲ್ಡೀವ್ಸ್ ಪರ. ನನ್ನ ಮೊದಲ ಆದ್ಯತೆಯು ಮಾಲ್ಡೀವ್ಸ್ ಮತ್ತು ಇಲ್ಲಿನ ಪರಿಸ್ಥಿತಿ' ಎಂದು ಸ್ಪಷ್ಟಪಡಿಸಿದ್ದಾರೆ.
'ನಾವು ಮಾಲ್ಡೀವ್ಸ್ ಪರವಾದುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ನಮ್ಮ ಮಾಲ್ಡೀವ್ಸ್ ಪರ ನೀತಿಯನ್ನು ಗೌರವಿಸುವ ಮತ್ತು ಪಾಲಿಸುವ ಯಾವುದೇ ದೇಶವನ್ನು ಮಾಲ್ಡೀವ್ಸ್‌ನ ಆಪ್ತ ಸ್ನೇಹಿತನಾಗಿ ಪರಿಗಣಿಸಲಾಗುವುದು' ಎಂದು ಅವರು ಹೇಳಿದ್ದಾರೆ.
ನಿರ್ಗಮಿತ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಸಾಂಪ್ರದಾಯಿಕ ಪಾಲುದಾರ ರಾಷ್ಟ್ರ ಭಾರತದೊಂದಿಗೆ ಉತ್ತಮ ಸಂಬಂಧ ಸಾಧಿಸಿದ್ದರು. ಅವರ ಹಿಂದಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಚೀನಾದಿಂದ ಹೆಚ್ಚು ಸಾಲ ಪಡೆದು, ದೇಶವನ್ನು ಬೀಜಿಂಗ್ ಹಿಡಿತಕ್ಕೆ ಸಿಲುಕಿಸಿದ್ದರು.
ಭ್ರಷ್ಟಾಚಾರ ಅಪರಾಧದಲ್ಲಿ 11 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ, ಅತಿ ಭದ್ರತೆಯ ಮಾಫುಶಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಯಮೀನ್ ಅವರನ್ನು ತಮ್ಮ ವಿಜಯದ ಕೆಲವೇ ತಾಸುಗಳಲ್ಲಿ ಮುಯಿಝು ಬಿಡುಗಡೆಗೆ ಆದೇಶಿಸಿದರು. ಯಮೀನ್ ಅವರನ್ನು ಸದ್ಯ, ಮಾಲೆಯಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ. ಯಮೀನ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ಅವರ ಬದಲು ಅವರ ಬೆಂಬಲಿಗ ಮುಯಿಝು ಸ್ಪರ್ಧಿಸಿದ್ದರು.
ಮುಯಿಝು ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅವರನ್ನು ಅಭಿನಂದಿಸಿದ ಮೊದಲಿಗರಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 'ಭಾರತ-ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧ ಬಲಪಡಿಸಲು ಭಾರತ ಬದ್ಧ' ಎಂದು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹೇಳಿಕೆ ನೀಡಿದ್ದರು.





