ತಿರುವನಂತಪುರ: ಎನ್‌ಡಿಎ ಸೇರುವ ಜೆಡಿಎಸ್ ನಿರ್ಧಾರಕ್ಕೆ ವಿಜಯನ್ ಅವರು 'ಪೂರ್ಣ ಸಮ್ಮತಿ' ನೀಡಿದ್ದಾರೆ ಎಂಬ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಹೇಳಿಕೆಯು 'ನಿರಾಧಾರ' ಮತ್ತು 'ಅಸಂಬದ್ಧ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
'ದೇವೇಗೌಡರು ತಮ್ಮ ಈ ಹೇಳಿಕೆಯನ್ನು ಸರಿಪಡಿಸುವ ಮೂಲಕ ರಾಜಕೀಯ ಸಭ್ಯತೆ ಮರೆಯಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಪಕ್ಷವನ್ನು ಉಳಿಸಲು ಬಿಜೆಪಿ ಜತೆ ಸಾಗುವುದಕ್ಕೆ ಕೇರಳ ಮುಖ್ಯಮಂತ್ರಿ 'ಪೂರ್ಣ ಸಮ್ಮತಿ' ನೀಡಿದ್ದಾರೆ ಹಾಗೂ ಕೇರಳ ಜೆಡಿಎಸ್ ನಾಯಕರೂ ಈ ನಿಲುವನ್ನು ಅರ್ಥ ಮಾಡಿಕೊಂಡು ಸಮ್ಮತಿಸಿದ್ದಾರೆ ಎಂದು ದೇವೇಗೌಡರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಇದು ಕೇರಳದಲ್ಲಿ ರಾಜಕೀಯ ಗದ್ದಲ ಎಬ್ಬಿಸಿದೆ. 'ಕೇರಳದಲ್ಲಿ ಸಿಪಿಎಂ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಪಾಲುದಾರ ಪಕ್ಷವಾಗಿದ್ದು, ಒಂದು ಸಚಿವ ಸ್ಥಾನವನ್ನೂ ಹೊಂದಿದೆ. ಜೆಡಿಎಸ್- ಬಿಜೆಪಿ ಮೈತ್ರಿಯು ಸಿಪಿಎಂ- ಬಿಜೆಪಿ ಜತೆಗಿನ ನಂಟನ್ನು ಬಯಲು ಮಾಡಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.
'ದೇವೇಗೌಡರು ತಮ್ಮ ಬದಲಾಗುತ್ತಿರುವ ರಾಜಕೀಯ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ' ಎಂದು ಕಟು ಶಬ್ದಗಳಲ್ಲಿ ಟೀಕಿಸಿರುವ ವಿಜಯನ್ ಅವರು, 'ಗೌಡರು ಈ ಹಿಂದೆಯೂ ತನ್ನ ಮಗ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಪಕ್ಷದ ಸಿದ್ಧಾಂತಕ್ಕೆ ದ್ರೋಹ ಎಸಗಿದ್ದರು' ಎಂದು ಆರೋಪಿಸಿದ್ದಾರೆ.
'ಕೇರಳದ ಜೆಡಿಎಸ್ ಘಟಕವು ಯಾವಾಗಲೂ ಎಡ ರಂಗದ ಜತೆ ಗುರುತಿಸಿಕೊಂಡಿದೆ. ಇದೇ ರೀತಿಯ ಬೆಳವಣಿಗೆ 2006ರಲ್ಲಿ ನಡೆದಾಗಲೂ ಇಲ್ಲಿನ ಜೆಡಿಎಸ್ ನಾಯಕರು ನಿಲುವು ಬದಲಿಸಿರಲಿಲ್ಲ. ಈ ಬಾರಿಯೂ ಕೇರಳದ ಜೆಡಿಎಸ್ ನಾಯಕರು ಬಿಜೆಪಿ ಮೈತ್ರಿಯನ್ನು ವಿರೋಧಿಸಿದ್ದಾರೆ ಮತ್ತು ಎಡ ರಂಗದ ಜತೆ ನಿಂತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ತಿಳಿಸಿದ್ದಾರೆ.
'ಸಿಪಿಎಂ- ಬಿಜೆಪಿ ನಂಟಿನ ಕುರಿತು ಮಾತನಾಡಿರುವ ಕಾಂಗ್ರೆಸ್ ಪಕ್ಷವು ಕೇರಳದ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಜತೆಗೂಡಿದೆ' ಎಂದು ಅವರು ಆರೋಪಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಂಡ್ಯ ಕ್ಷೇತ್ರದಲ್ಲಿ ನಟಿ ಸುಮಲತಾ ಅವರನ್ನು ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಸಿದ್ದವು ಎಂದು ಸಿಪಿಎಂ ಹಿರಿಯ ನಾಯಕ ಹೇಳಿದ್ದಾರೆ.
ಕೇರಳದಲ್ಲಿನ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಮ್ಯಾಥ್ಯೂ ಟಿ. ಥಾಮಸ್ ಮತ್ತು ಇಂಧನ ಸಚಿವ ಕೆ.ಕೃಷ್ಣನ್‌ಕುಟ್ಟಿ ಅವರು ದೇವೇಗೌಡರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಈ ಸಂಬಂಧ ದೇವೇಗೌಡರು ಮತ್ತು ವಿಜಯನ್ ಅವರ ಜತೆ ಯಾವುದೇ ಮಾತುಕತೆ ನಡೆದಿಲ್ಲ ಎಂದಿರುವ ಅವರು, ಬಿಜೆಪಿ ಜತೆಗಿನ ಪಕ್ಷದ ಮೈತ್ರಿ ವಿಚಾರಕ್ಕೆ ತಮ್ಮ ಆಕ್ಷೇಪವನ್ನು ಗೌಡರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.
'ಮೈತ್ರಿ ಕುರಿತ ದೇವೇಗೌಡರ ಹೇಳಿಕೆಯು ಸಿಪಿಎಂ- ಬಿಜೆಪಿ ನಂಟನ್ನು ದೃಢಪಡಿಸಿದೆ' ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ. ಕೇಂದ್ರೀಯ ಸಂಸ್ಥೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಿಪಿಎಂ ಮತ್ತು ವಿಜಯನ್ ಅವರ ಸರ್ಕಾರವು ಬಿಜೆಪಿ ಜತೆ ನಂಟು ಬೆಳೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಎಡ ರಂಗದ ಜತೆ ಉಳಿಯಲು ಜೆಡಿಎಸ್ ರಾಜ್ಯ ಘಟಕ ನಿರ್ಧಸಿದೆಯಾದರೂ, ಮುಂದಿನ ದಿನಗಳಲ್ಲಿ ಹೊಸ ಪಕ್ಷ ರಚನೆ ಮಾಡಬೇಕೊ ಅಥವಾ ಇತರ ಸ್ಥಳೀಯ ಪಕ್ಷಗಳ ಜತೆ ವಿಲೀನವಾಗಬೇಕೊ ಎಂಬುದರ ಕುರಿತು ನಾಯಕರಲ್ಲಿ ಒಮ್ಮತ ಮೂಡಿಲ್ಲ. ಈ ಕುರಿತು ಮುಂದಿನ ಯೋಜನೆಗಳನ್ನು ನಿರ್ಧರಿಸಲು ಪಕ್ಷದ ನಾಲ್ವರು ಹಿರಿಯ ನಾಯಕರ ಸಮಿತಿಯನ್ನು ರಚಿಸಲಾಗಿದೆ.




.webp)
