ನವದೆಹಲಿ: ಇಸ್ರೇಲ್-ಪ್ಯಾಲೆಸ್ಟೀನ್ ಯುದ್ಧದಲ್ಲಿ ಅಪಹರಣಕ್ಕೀಡಾಗಿರುವ ಮಕ್ಕಳನ್ನು ಬಿಡುಗಡೆ ಮಾಡುವಂತೆ ಭಾರತದ ಕೈಲಾಶ್ ಸತ್ಯಾರ್ಥಿ ಸೇರಿದಂತೆ 29 ಮಂದಿ ನೊಬೆಲ್ ಪ್ರಶಸ್ತಿ ಪುರಸ್ಕೃತರು ಒತ್ತಾಯಿಸಿದ್ದಾರೆ.
ಸಂಘರ್ಷದ ನೆಲದಿಂದ ಅವರು ಹೊರಬರಲು ಸುರಕ್ಷಿತ ಮಾರ್ಗ ತೋರಿಸಬೇಕು.
'ಮುಂಬರುವ ದಿನಗಳಲ್ಲಿ ಮತ್ತಷ್ಟು ಜೀವ ಹಾನಿಯಾಗುವ ಅಪಾಯದ ಪರಿಸ್ಥಿತಿ ಇದೆ. ಉಭಯ ದೇಶಗಳ ಮಕ್ಕಳು ಸಾಯುತ್ತಾರೆ. ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಎರಡೂ ದೇಶಗಳ ಮಕ್ಕಳು ನಮ್ಮವರೇ. ಮಕ್ಕಳನ್ನು ಕೊಲ್ಲುವುದು ನಾಗರಿಕತೆಯ ಲಕ್ಷಣವಲ್ಲ'ಎಂದೂ ಅವರು ಹೇಳಿದ್ದಾರೆ.
ಅಪಹರಣಕ್ಕೊಳಗಾಗಿರುವ ಮಕ್ಕಳನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಸಂಘರ್ಷ ಪೀಡಿತ ಪ್ರದೇಶದಿಂದ ಅವರು ಸುರಕ್ಷಿತವಾಗಿ ತೆರಳಲು ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.
'ನೀರು, ಆಹಾರ, ಚಿಕಿತ್ಸೆ ಮತ್ತು ವಸತಿ ಸೌಲಭ್ಯ ಸಿಗದೆ ಮಕ್ಕಳು ನರಳಬಾರದು. ಮಕ್ಕಳು ಮತ್ತು ದುರ್ಬಲ ಜನರಿಗೆ ಕೂಡಲೇ ಮಾನವೀಯ ನೆರವು ಸಿಗಬೇಕು. ಗಾಜಾ ಮತ್ತು ಇಸ್ರೇಲ್‌ನಲ್ಲಿರುವ ಲಕ್ಷಾಂತರ ಮಕ್ಕಳನ್ನು ರಕ್ಷಣೆ ಮಾಡಬೇಕು' ಎಂದಿದ್ದಾರೆ.
'ಇಂದು ರಾತ್ರಿ ಈ ಕಗ್ಗತ್ತಲ ನಡುವೆ ನಾವು ಮೂರು ಮೇಣದಬತ್ತಿ ಹಚ್ಚುತ್ತೇವೆ. ಒಂದು ಮೇಣದಬತ್ತಿಯು ಇಸ್ರೇಲ್‌ನಲ್ಲಿ ಕೊಲ್ಲಲ್ಪಟ್ಟ ಮಕ್ಕಳಿಗಾಗಿ, ಮತ್ತೊಂದು ಗಾಜಾದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಮತ್ತು ಅಂಗವಿಕಲರಾದ ಮಕ್ಕಳಿಗಾಗಿ. ಇನ್ನೊಂದು ಮಾನವೀಯತೆ ಮತ್ತು ಭರವಸೆಗಾಗಿ' ಎಂದು ನೊಬೆಲ್ ಪುರಸ್ಕೃತರು ಹೇಳಿದ್ದಾರೆ.




.webp)
