ನವದೆಹಲಿ : 'ನ್ಯೂಟನ್' ಚಲನಚಿತ್ರದ ನಟ ರಾಜ್‌ಕುಮಾರ್ ರಾವ್ ಅವರನ್ನು ರಾಷ್ಟ್ರೀಯ ಐಕಾನ್ ಆಗಿ ಚುನಾವಣಾ ಆಯೋಗ ನೇಮಕ ಮಾಡಿದೆ.
ಚುನಾವಣೆಯಲ್ಲಿ ಭಾಗವಹಿಸುವಂತೆ ಮತದಾರರನ್ನು ಪ್ರೋತ್ಸಾಹಿಸಲು ಆಯೋಗವು ದೇಶದ ಪ್ರಮುಖರನ್ನು ರಾಷ್ಟ್ರೀಯ ಐಕಾನ್ ಎಂದುಯ ನೇಮಿಸುತ್ತದೆ.
ನಟರಾದ ಪಂಕಜ್ ತ್ರಿಪಾಠಿ ಮತ್ತು ಅಮೀರ್‌ಖಾನ್, ಕ್ರೀಡಾಪಟುಗಳಾದ ಸಚಿನ್ ತೆಂಡುಲ್ಕರ್, ಎಂ.ಎಸ್.ಧೋನಿ ಮತ್ತು ಮೇರಿ ಕೋಮ್ ಅವರಿಗೆ ಈ ಗೌರವ ಲಭಿಸಿದೆ.
'ನ್ಯೂಟನ್' ಚಿತ್ರದಲ್ಲಿ ನಕ್ಸಲ್ ಪೀಡಿತ ಛತ್ತೀಸಗಢದಲ್ಲಿ ಚುನಾವಣೆ ನಡೆಸುವ ಪ್ರಮುಖ ವ್ಯಕ್ತಿ ಪಾತ್ರದಲ್ಲಿ ರಾವ್ ಅಭಿನಯಿಸಿದ್ದು ಈ ಪಾತ್ರಕ್ಕಾಗಿ ಇವರು ಪ್ರಶಸ್ತಿಯನ್ನೂ ಪಡೆದಿದ್ದಾರೆ.
4 ಸ್ಥಾನಗಳಲ್ಲಿ ಅಭ್ಯರ್ಥಿಗಳು ಬದಲು
ಭೋಪಾಲ್ : ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಳಿಕ ಪ್ರತಿಭಟನೆಗಳು ನಡೆದಿದ್ದವು.
ಸುಮಾವಲಿ, ಪಿಪರಿಯಾ, ಬಡ್‌ನಗರ್ ಮತ್ತು ಜಾವರಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಲಾಗಿದೆ. ಬುಧವಾರ ಬೆಳಿಗ್ಗೆ ಸಭೆ ಸೇರಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಈ ನಿರ್ಧಾರ ಕೈಗೊಂಡಿತು.
ಬಡ್‌ನಗರದಿಂದ ಮುರಲಿ ಮೊರ್ವಾಲ್, ಪಿಪರಿಯಾದಿಂದ ವೀರೇಂದ್ರ ಬೆಲ್ವಂಶಿ, ಸುಮಾವಲಿಯಿಂದ ಅಜಬ್ ಸಿಂಗ್ ಕುಶ್ವಾಹ ಮತ್ತು ಜಾವರಾದಿಂದ ವೀರೇಂದ್ರ ಸಿಂಗ್ ಸೋಲಂಕಿ ಅವರನ್ನು ಕಣಕ್ಕಿಳಿಸಲಾಗಿದೆ.
ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಜೆಡಿ(ಯು)
ಪಟ್ನಾ (ಪಿಟಿಐ): ಮಧ್ಯಪ್ರದೇಶದಲ್ಲಿ ಜೆಡಿ(ಯು) ಐದು ಸ್ಥಾನಕ್ಕಾಗಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಪಕ್ಷ ಪ್ರಕಟಿಸಿದ ಮೊದಲ ಪಟ್ಟಿ ಇದಾಗಿದೆ.
ಚಂದ್ರಪಾಲ್ ಯಾದವ್ (ಪಿಚ್ಚೋರ್), ರಾಮ್ ಕುನ್ವರ್ (ರಾಜ್‌ನಗರ್), ಶಿವ ನಾರಾಯಣ್ ಸೋನಿ (ವಿಜಯ ರಾಘವ್‌ಗಡ), ತೋಲ್ ಸಿಂಗ್ ಭುರಿಯಾ (ಥಾಂಡ್ಲಾ) ಮತ್ತು ರಾಮೇಶ್ವರ್ ಸಿಂಗ್ಲಾ (ಪೆಟಲವಾಡ್) ಅವರು ಸ್ಪರ್ಧಿಸಲಿದ್ದಾರೆ ಎಂದು ಎಂದು ಜೆಡಿ (ಯು) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಫ್ತಖ್ ಅಹ್ಮದ್ ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಿಜೋರಾಂ: 112 ಮಂದಿ ಕೋಟ್ಯಧಿಪತಿಗಳು
ಐಜ್ವಾಲ್ : ಮಿಜೋರಾಂ ವಿಧಾನಸಭಾ ಚುನಾವಣೆಯ ಕಣದಲ್ಲಿರುವ ಒಟ್ಟು 174 ಅಭ್ಯರ್ಥಿಗಳಲ್ಲಿ 112 ಮಂದಿ ಕೋಟ್ಯಧಿಪತಿಗಳಾಗಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಾಧ್ಯಕ್ಷ ಆಂಡ್ರ್ಯೂ ಲಾಲ್ರೆಮ್ಕಿಮಾ ಪಚುವು ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್‌ಗಳ ಪ್ರಕಾರ, ಶೇಕಡಾ 64.4 ರಷ್ಟು ಅಭ್ಯರ್ಥಿಗಳು ₹1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
₹68.93 ಕೋಟಿ ಮೌಲ್ಯದ ಘೋಷಿತ ಆಸ್ತಿಯೊಂದಿಗೆ, ಎಎಪಿಯ ಮಿಜೋರಾಂ ರಾಜ್ಯ ಘಟಕದ ಅಧ್ಯಕ್ಷ ಆಂಡ್ರ್ಯೂ ಲಾಲ್ರೆಮ್ಕಿಮಾ ಪಚುವು ಕಣದಲ್ಲಿರುವ ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತರಾಗಿದ್ದಾರೆ. ಅವರು ಐಜ್ವಾಲ್ ಉತ್ತರ-III ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಪಚುವು ನಂತರದ ಸ್ಥಾನಗಳಲ್ಲಿ ₹55.6 ಕೋಟಿ ಆಸ್ತಿ ಘೋಷಿಸಿಕೊಂಡಿರುವ ಕಾಂಗ್ರೆಸ್‌ನ ಆರ್ ವನ್ಲಾಲ್ಟ್ಲುವಾಂಗಾ (ಸೆರ್ಚಿಪ್ ಕ್ಷೇತ್ರ) ಮತ್ತು ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ನ ಎಚ್ ಗಿಂಜಲಾಲಾ (ಚಾಂಫೈ ಉತ್ತರ ಕ್ಷೇತ್ರ ) ₹36.9 ಕೋಟಿ ಘೋಷಿತ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಸೆರ್ಚಿಪ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಮ್‌ಲುನ್-ಎಡೆನಾ ಅತ್ಯಂತ ಬಡ ಅಭ್ಯರ್ಥಿಯಾಗಿದ್ದು, ₹1,500 ಮೌಲ್ಯದ ಚರಾಸ್ತಿ ಹೊಂದಿದ್ದಾರೆ.





