ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆಯನ್ವಯ ತಲಪ್ಪಾಡಿಯಿಂದ ಚೆರ್ಕಳ ವರೆಗಿನ ಮೊದಲ ರೀಚ್‍ನ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಸರಗೋಡು ನಗರದಲ್ಲಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗಳಿಂದ ನಗರದ ಮುಖಚ್ಛಾಯೆ ಬದಲಾಗುತ್ತಿದೆ.
ತಲಪ್ಪಾಡಿ-ಚೆಂಗಳ ರೀಚ್‍ನ ಅತ್ಯಂತ ಉದ್ದದ ಮೇಲ್ಸೇತುವೆ ಕರಂದಕ್ಕಾಡಿನಿಂದ ನುಳ್ಳಿಪ್ಪಾಡಿ ವರೆಗೆ ನಿರ್ಮಾಣವಾಗಲಿದೆ. ಏಕ ಪಿಲ್ಲರ್ ಮೂಲಕ ಅಗಲವಾದ ರಸ್ತೆಯೊಂದಿಗೆ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಕಾಮಗಾರಿ ಶೇ. 40ರಷ್ಟು ಈಗಾಗಲೇ ಪೂರ್ತಿಗೊಂಡಿದೆ. ಕರಂದಕ್ಕಾಡು ಹಾಗೂ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರ ಅತ್ಯಂತ ಜನದಟ್ಟಣೆ ಹಾಗೂ ವಾಹನಗಳ ದಟ್ಟಣೆಯಿರುವ ಪ್ರದೇಶವಾಗಿದ್ದು, ರಸ್ತೆಕಾಮಗಾರಿಯಿಂದ ಭಾರೀ ಟ್ರಾಫಿಕ್ ಜಾಮ್‍ಗೂ ಕಾರಣವಾಗಿತ್ತಿದೆ. ರಸ್ತೆಅಭಿವೃದ್ಧಿ ಕಾಮಗಾರಿ ವಹಿಸಿಕೊಂಡಿರುವ ಊರಾಲುಂಗಾಲ್ ಸೊಸೈಟಿ ಸಿಬ್ಬಂದಿ ಪೊಲೀಸರೊಂದಿಗೆ ಕೈಜೋಡಿಸಿ, ಸಂಚಾರ ನಿಯಂತ್ರಣದಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಟ್ರಾಫಿಕ್ ಜಾಮ್‍ಗೆ ಒಂದಷ್ಟು ಮುಕ್ತಿ ಲಭಿಸಿದೆ.
ಚರಂಡಿ ಅವ್ಯವಸ್ಥೆ:
ರಸ್ತೆ ಅಭಿವೃದ್ಧಿ ಕಾರ್ಯಗಳಿಂದ ಪೇಟೆಯ ಚರಂಡಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಬಿರುಸಿನ ಮಳೆಯಾದಲ್ಲಿ ಪೇಟೆಯಲ್ಲಿ ಮಳೆನೀರು ಸಂಚಾರಕ್ಕೆ ಭಾರಿ ಸಮಸ್ಯೆ ಎದುರಾಗುತ್ತಿದೆ. ತಾತ್ಕಾಲಿಕ ಚರಂಡಿಗಳ ನಿರ್ಮಾಣ ನಡೆಸುತ್ತಿದ್ದರೂ, ಮಳೆನೀರು ಸರಾಗವಾಗಿ ಹರಿಯಲಾಗದೆ ಸಮಸ್ಯೆ ಕಾಡುತ್ತಿದೆ. ಕೆಲವೊಮ್ಮೆ ಕೆಸರಿನ ನೀರು ವ್ಯಾಪಾರಿ ಸಂಸ್ಥೆಗಳ ಒಳಗೂ ನುಗ್ಗುತ್ತಿದೆ. ಹೊಸಂಗಡಿ, ಕುಂಬಳೆ ಪೇಟೆ, ಮೊಗ್ರಾಲ್ ಪೇಟೆಯಲ್ಲೂ ಮೇಲ್ಸೇತುವೆ ಕಾಮಗಾರಿ ಬಿರುಸಿನಿಂದ ಸಾಗುತ್ತಿದೆ. 2024ರ ಅಂತ್ಯಕ್ಕೆ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಳ್ಳಲಿರುವುದಾಗಿ ಅಧಿಕಾರಿಗಳು ತಿಳಿಸುತ್ತರೆ.

.jpg)
