ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ಧ ದಏವಲಯಗಳಲ್ಲಿ ಒಂದಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಫೆಬ್ರವರಿ 16 ರಿಂದ 29 ರ ವರೆಗೆ ನಡೆಯಲಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬುಧವಾರ ದೇವಸ್ಥಾನ ಸಭಾಂಗಣದಲ್ಲಿ ಜರುಗಿತು. ದೇವಸ್ಥಾನದ ತಂತ್ರಿಗ ದೇಲಂಪಾಡಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ಕಾಯಕ್ರ್ರಮ ನಡೆಯಿತು. ಶ್ರೀದೇವರ ನಡೆಯಲ್ಲಿ ಇರಿಸಿ ಪ್ರಾರ್ಥಿಸಿದ ಬಳಿಕ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿದರು.
ಆಶೀರ್ವಚನ ನೀಡಿದ ಎಡನೀರು ಶ್ರೀಗಳು ಭಗವಂತನ ಅನುಗ್ರಹದಿಂದ ಎಲ್ಲಾ ಸಂಕಲ್ಪಿತ ಕಾರ್ಯಗಳು ಸುಸೂತ್ರವಾಗಿ ಹಾಗು ಯಶಸ್ವಿಯಾಗಿ ನಡೆಯುತ್ತದೆ. ಕುಂಬಳೆ ಸೀಮೆಯ ಪ್ರಮುಖ ದೇವಾಲಯವಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾದರಿಯಾಗಲಿ ಎಂದು ಹೇಳಿದರು.
ಈ ಸಂದರ್ಭ ಕುಂಬಳೆಯ ಹಿರಿಯ ವ್ಯಾಪಾರಿ ನರಸಿಂಹ ನಾಯಕ್ ಗುರುವಾಯನಕೆರೆ ಹಾಗೂ ಜೀವವಿಮಾ ನಿಗಮದ ನಿವೃತ್ತ ಅಧಿಕಾರಿ ರಾಮಕೃಷ್ಣ ಶೇಡಿಕಾವು ಅವರಿಗೆ ಬೆಳ್ಳಿಯ ಕಲಶ ಹಾಗೂ ತಾಮ್ರದ ಕಲಶದ ಕೂಪನ್ ಮೊದಲ ಕೂಪನ್ ನೀಡುವ ಮೂಲಕ ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಗಣೇಶ್ ತಂತ್ರಿ ಬಿಡುಗಡೆಗೊಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪೈ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಮಾಯಿಪ್ಪಾಡಿ ಅರಮನೆಯ ಪ್ರತಿನಿಧಿ ಚಂದ್ರ ಮೋಹನ್ ರಾಜ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ: ಸುನಿಲ್ ಕುಮಾರ್, ಚಕ್ರಪಾಣಿ ದೇವಪೂಜಿತ್ತಾಯ, ಮಂಜುನಾಥ ಆಳ್ವ ಮಡ್ವ,ಸುಧಾಕರ ಕಾಮತ್, ಕೆ.ಸಿ.ಮೋಹನ, ಲಕ್ಷಣ ನೋಂಡಾ, ರಾಮಚಂದ್ರ ಗಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಜಯ ಕುಮಾರ್ ಕೆ. ಎಂ, ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು, ದಯಾನಂದ ರಾವ್,ವಿಕ್ರಂ ಪೈ, ಮಾತೃಮಂಡಳಿ ಸಮಿತಿ ಹಾಗೂ ವಿವಿಧ ಉಪ ಸಮಿತಿಯ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ ಹಾಗೂ ಸಾಂಸ್ಕøತಿಕ ಸಮಿತಿಯ ಪ್ರಧಾನ ಸಂಚಾಲಕ ಶಂನಾಡಿಗ ಕುಂಬಳೆ ಸ್ವಾಗತಿಸಿದರು. ಮಹಿಳಾ ಸಮಿತಿ ಮತ್ತು ಸ್ಮರಣ ಸಂಚಿಕೆ ಸಮಿತಿ ಸಹ ಸಂಚಾಲಕಿ ವಿಜಯಲಕ್ಷ್ಮೀ ಶಂನಾಡಿಗ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಡಿ.ದಾಮೋದರ ವಂದಿಸಿದರು.

