ನವದೆಹಲಿ: ಗುತ್ತಿಗೆ ಪಡೆದ ಬೋಯಿಂಗ್ 777 ವಿಮಾನಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಏರ್ ಇಂಡಿಯಾಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ₹ 1.10 ಕೋಟಿ ದಂಡ ವಿಧಿಸಿದೆ.
0
samarasasudhi
ಜನವರಿ 24, 2024
ನವದೆಹಲಿ: ಗುತ್ತಿಗೆ ಪಡೆದ ಬೋಯಿಂಗ್ 777 ವಿಮಾನಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಏರ್ ಇಂಡಿಯಾಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ₹ 1.10 ಕೋಟಿ ದಂಡ ವಿಧಿಸಿದೆ.
ಒಂದೇ ವಾರದಲ್ಲಿ ಏರ್ ಇಂಡಿಯಾಕ್ಕೆ ದಂಡ ವಿಧಿಸುತ್ತಿರುವ ಎರಡನೇ ಪ್ರಕರಣ ಇದಾಗಿದೆ.
ಭಾರತ ಅಮೆರಿಕ ನಡುವೆ ಹಾರಾಟ ನಡೆಸುವ ಬೋಯಿಂಗ್ 777 ವಿಮಾನದಲ್ಲಿ ತುರ್ತು ಸಂದರ್ಭದಲ್ಲಿ ಆಮ್ಲಜನಕ ಪೂರೈಸುವ ವ್ಯವಸ್ಥೆ ಇಲ್ಲ ಎಂದು ಏರ್ ಇಂಡಿಯಾದ ಮಾಜಿ ಪೈಲೆಟ್ ಒಬ್ಬರು ದೂರು ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ DGCA, ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಈ ಕುರಿತಂತೆ ವಿಸ್ತೃತ ತನಿಖೆ ನಡೆಸಿರುವ ಮಹಾನಿರ್ದೇಶನಾಲಯವು, ವಿಮಾನಯಾನ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
'ಗುತ್ತಿಗೆ ಪಡೆದ ವಿಮಾನವು ಮೂಲ ಪರಿಕರಗಳ ತಯಾರಿಕರೊಂದಿಗೆ ಒಪ್ಪಂದ ಹೊಂದಿಲ್ಲ ಎಂಬುದನ್ನು ಪರಿಗಣಿಸಿ ಏರ್ ಇಂಡಿಯಾಗೆ ₹ 1.10 ಕೋಟಿ ದಂಡ ವಿಧಿಸಲಾಗಿದೆ' ಎಂದು ಡಿಜಿಸಿಎ ಬುಧವಾರ ಹೇಳಿದೆ.
2023ರ ಅ. 29ರಂದು ಬೋಯಿಂಗ್ 777ನ ಕಮಾಂಡರ್ ಆಗಿ ಕೆಲಸ ಮಾಡಿದ ಪೈಲಟ್, ವಿಮಾನದಲ್ಲಿ ತುರ್ತು ಸಂದರ್ಭದಲ್ಲಿ ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದರು. ಆ ಸಂದರ್ಭದಲ್ಲಿ ಆಮ್ಲಜನಕ ಉತ್ಪಾದಿಸುವ ವ್ಯವಸ್ಥೆ ನಿಷ್ಕ್ರಿಯೆಗೊಂಡು 12 ನಿಮಿಷಗಳಾಗಿತ್ತು. ವಿಮಾನವು 10 ಸಾವಿರ ಅಡಿಗಳಿಗಿಂತ ಕೆಳಗೆ ಹಾರಾಟ ನಡೆಸುವುದಾದರೆ ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆ ಕಡ್ಡಾಯವಾಗಿ ವಿಮಾನಗಳಲ್ಲಿ ಇರಬೇಕು.
ಅದರಲ್ಲೂ ಪರ್ವತಗಳಂತ ಪ್ರದೇಶಗಳಲ್ಲಿ 9 ಸಾವಿರದಿಂದ 10 ಸಾವಿರ ಅಡಿಗಳ ಎತ್ತರದಲ್ಲಿನ ಹಾರಾಟದಲ್ಲಿ ಇದು ಕಡ್ಡಾಯ. ವಿಮಾನಯಾನದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪ್ರಥಮ ಆದ್ಯತೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಡಿಜಿಸಿಎ ಹೇಳಿದೆ.