ನವದೆಹಲಿ: ಅಪಘಾತ ಮಾಡಿ ಪರಾರಿಯಾದ ಪ್ರಕರಣಗಳಲ್ಲಿ, ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ನೀಡುವ ಪರಿಹಾರದ ಮೊತ್ತವನ್ನು ಪ್ರತಿವರ್ಷವೂ ಹೆಚ್ಚಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
0
samarasasudhi
ಜನವರಿ 15, 2024
ನವದೆಹಲಿ: ಅಪಘಾತ ಮಾಡಿ ಪರಾರಿಯಾದ ಪ್ರಕರಣಗಳಲ್ಲಿ, ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ನೀಡುವ ಪರಿಹಾರದ ಮೊತ್ತವನ್ನು ಪ್ರತಿವರ್ಷವೂ ಹೆಚ್ಚಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಈ ವಿಚಾರವಾಗಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿದೆ.
ಅಪಘಾತ ನಡೆಸಿ ಪರಾರಿಯಾದ ಪ್ರಕರಣಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ₹50 ಸಾವಿರ ಹಾಗೂ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ₹2 ಲಕ್ಷ ಅಥವಾ ಕೇಂದ್ರ ಸರ್ಕಾರ ನಿರ್ಧರಿಸುವ ಇನ್ನೂ ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ನೀಡಬೇಕು ಎಂಬ ಅಂಶವು ಮೋಟಾರು ವಾಹನ ಕಾಯ್ದೆ -1988ರಲ್ಲಿ ಇದೆ ಎಂದು ಕೋರ್ಟ್ ಹೇಳಿದೆ.
ಇಂತಹ ಪ್ರಕರಣಗಳ ಸಂತ್ರಸ್ತರಿಗೆ ಈ ವಿಚಾರವನ್ನು ತಿಳಿಸುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ 2022ರಲ್ಲಿ ಇಂತಹ 67,387 ಪ್ರಕರಣಗಳು ವರದಿಯಾಗಿವೆ. 2016ರಲ್ಲಿ ಇದು 55,942 ಆಗಿತ್ತು.
ಅಪಘಾತ ನಡೆಸಿ ಪರಾರಿಯಾದ ಪ್ರಕರಣಗಳ ಸಂಖ್ಯೆ ಹಾಗೂ ಪರಿಹಾರ ಕೋರಿ ದಾಖಲಾದ ಪ್ರಕರಣಗಳ ಸಂಖ್ಯೆಯನ್ನು ಹೋಲಿಕೆ ಮಾಡಿ ನೋಡಿದರೆ, ಪರಿಹಾರದ ಪ‍್ರಯೋಜನವನ್ನು ಪಡೆದುಕೊಂಡವರ ಸಂಖ್ಯೆ ಕಡಿಮೆ ಎಂಬುದು ಗೊತ್ತಾಗುತ್ತದೆ ಎಂದು ಪೀಠ ಹೇಳಿದೆ. ಪರಿಹಾರ ನೀಡುವ ವ್ಯವಸ್ಥೆ ಇದೆ ಎಂಬುದು ಸಂತ್ರಸ್ತರಿಗೆ ಗೊತ್ತಿಲ್ಲದಿರುವುದು ಕೂಡ ಇದಕ್ಕೆ ಒಂದು ಕಾರಣವಾಗಿರಬಹುದು ಎಂದು ಪೀಠ ಹೇಳಿದೆ.
ಪರಿಹಾರ ನೀಡುವ ವ್ಯವಸ್ಥೆಯು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂಬ ಕೋರಿಕೆ ಇರುವ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.