ಕಾಸರಗೋಡು: ಜಿಲ್ಲೆಯ ವಿವಿಧೆಡೆ ಕಳೆದ ಎರಡು ವಾರಗಳಿಂದ ಸರಣಿಕಳವು ಹೆಚ್ಚುತ್ತಿರುವ ಮಧ್ಯೆ ನಗರದ ಎ.ಟಿ ರಸ್ತೆಯ ಬ್ಲಾಕ್ ಪಂಚಾಯಿತಿ ಕಚೇರಿ ಎದುರು ಚಟುವಟಿಕೆ ನಡೆಸುತ್ತಿರುವ ವ್ಯಾಪಾರಿ ಭವನದಲ್ಲಿನ ವ್ಯಾಪಾರಿ ವ್ಯವಸಾಯಿ ವೆಲ್ಫೇರ್ ಕೋಓಪರೇಟಿವ್ ಸೊಸೈಟಿ ಬಾಗಿಲು ಒಡೆದು ನುಗ್ಗಿದ ಕಳ್ಳರು 1.60ಲಕ್ಷ ರೂ. ನಗದು ಕಳವುಗೈದಿದ್ದಾರೆ. ವಿಪರ್ಯಾಸವೆಂದರೆ ಎದುರು ಭಾಗದಲ್ಲಿ ಸೊಸೈಟಿ ಕಾವಲುಗಾರ ಕರ್ತವ್ಯದಲ್ಲಿದ್ದಂತೆ ಈ ಕಳವು ನಡೆದಿದೆ!
ಸೊಸೈಟಿ ಸಿಬ್ಬಂದಿ ಕಚೇರಿಗೆ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದೆ. ಸೊಸೈಟಿ ಕಾರ್ಯದರ್ಶಿ ಅನಿತಾ ಕೆ. ಅವರ ದೂರಿನ ಮೇರೆಗೆ ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು, ಶ್ವಾನದಳ ಆಗಮಿಸಿ ತಪಾಸಣೆ ನಡೆಸಿದ್ದು, ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನೂ ತಪಾಸಣೆ ನಡೆಸಲಾಗುತ್ತಿದೆ. ಕಟ್ಟಡದ ಹಿಂಭಾಗದಿಂದ ಆಗಮಿಸಿ, ಬಾಗಿಲು ಒಡೆದು ಕೊಠಡಿಯೊಳಗಿದ್ದ ಕ್ಯಾಶ್ ಲಾಕರ್ ಹೊರಗೆ ಸಾಗಿಸಿ ಇದರಿಂದ ಹಣ ತೆಗೆದು, ಲಾಕರನ್ನು ಎಲ್ಲೋ ಬಿಸಾಡಿರಬೇಕೆಂದು ಸಂಶಯಿಸಲಾಗಿದ್ದು, ಲಾಕರ್‍ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕೆಲವೇ ದಿವಸಗಳ ಹಿಂದೆ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸನಿಹದ ಶ್ರೀ ಶಾಸ್ತಾ ದೇವರ ಗುಡಿಯ ಕಾಣಿಕೆ ಹುಂಡಿಯಿಂದ ನಗದು ಕಳವು, ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸನಿಹದ ಕುಟುಂಬಶ್ರೀ ತರಕಾರಿ ಅಂಗಡಿಯಿಂದ 5ಸಾವಿರ ರೂ. ನಗದು ಕಳವು, ಸನಿಹದ ಲಾಟರಿ ಅಂಗಡಿಯಿಂದ ಕಳವಿಗೆ ಯತ್ನವೂ ನಡೆದಿತ್ತು.

