ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾರ್ಚ್ 24 ರಂದು ನಡೆಯಲಿರುವ ನವಗ್ರಹ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದ ಪೂರ್ವಭಾವಿಯಾಗಿ ಮಾರ್ಚ್ 16 ರಂದು ಸಂಜೆ 4. ಕ್ಕೆ ನೂತನ ಶಿಲಾಮಯ ನವಗ್ರಹ ವಿಗ್ರಹಗಳು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರು ಕ್ಷೇತ್ರದ ಪರಿಸರದಿಂದ ವಾಹನಗಳ ಮೂಲಕ ಹೊಸಂಗಡಿ ಶ್ರೀ ಅಯ್ಯಪ್ಪ ಭಜನಾ ಮಂದಿರಕ್ಕೆ ತಲುಪಲಿರುವುದು. ಮಾರ್ಚ್ 17 ರಂದು ಭಾನುವಾರ ಬೆಳಿಗ್ಗೆ 9. ಕ್ಕೆ ಹೊಸಂಗಡಿ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ವಾಹನಗಳ ಮೂಲಕ ಉಪ್ಪಳ ಪೇಟೆಗೆ ಬಂದು, 9.30 ಕ್ಕೆ ಉಪ್ಪಳ ಪೇಟೆಯಿಂದ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಮಠಕ್ಕೆ ಆಗಮಿಸಲಿರುವುದು.
ಬಳಿಕ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದಲ್ಲಿ ಉಪಯೋಗಿಸಲ್ಪಡುವ ನವಧಾನ್ಯ, ತುಪ್ಪ, ಸಮಿತ್ತುಗಳ ಸಮರ್ಪಣಾ ಕಾರ್ಯಕ್ರಮವು ನಡೆಯಲಿದೆ. ಧಾನ್ಯ ಸಮರ್ಪಣೆ ಮಾಡುವ ಭಕ್ತಾದಿಗಳಿಗೆ ಸಾವಯವವಾಗಿ ತಯಾರಿಸಿದ ಧಾನ್ಯಗಳು ಶ್ರೀ ಮಠದಲ್ಲಿ ಲಭ್ಯವಿದ್ದು ತಮ್ಮ ಗ್ರಹಗಳಿಗೆ ಸಂಬಂಧಿಸಿದ ಧಾನ್ಯಗಳ ಮೌಲ್ಯವನ್ನು ತೆತ್ತು ಪ್ರಾರ್ಥನೆ ಮಾಡಿ ಯಾಗಕ್ಕೆ ಸಮರ್ಪಿಸಬಹುದು ಹಾಗೂ ತುಪ್ಪವನ್ನು ಸಮರ್ಪಿಸುವವರಿಗೆ ಬೇಕಾದ ದೇಶೀ ತಳಿಯ ತುಪ್ಪವೂ ಮಠದಲ್ಲಿ ಲಭ್ಯವಿದೆ. ಭಕ್ತರು ತುಪ್ಪ ತರುವುದಾದರೆ ದೇಶೀ ತಳಿಯ ದನದ ತುಪ್ಪವನ್ನು ಮಾತ್ರ ಸಮರ್ಪಿಸಲು ಅವಕಾಶವಿರುವುದು. ಅದೇ ದಿನ ಪೂರ್ವಾಹ್ಣ 10.30 ಕ್ಕೆ ಯಾಗದ ಪೂರ್ವಭಾವಿ ಕಾರ್ಯಕರ್ತರ ವಿಶೇಷ ಸಭೆ, ವಿವಿಧ ವಿಭಾಗಗಳ ಜವಾಬ್ದಾರಿ ಘೋಷಣೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೇಂದು ಮಠದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

