ಕಾಸರಗೋಡು: ಸುಡುಬಿಸಿಲಿನ ಮಧ್ಯೆ ಎಳನೀರಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು, ಹೇಳುವ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ತೆಂಗು ಬೆಳೆಗಾರರು ಕೊಬ್ಬರಿಯಾಗಿ ಮಾರಾಟ ಮಾಡದೆ ಎಳನೀರು ಮಾರಾಟಮಾಡುವ ಮೂಲಕ ಲಾಭಕ್ಕೆ ಮಾರುತ್ತಿದ್ದಾರೆ.
ನಿಯಮಿತ ಮಧ್ಯಂತರದಲ್ಲಿ ಸಗಟು ವ್ಯಾಪಾರಿಗಳು ಆಗಮಿಸಿ ತೆಂಗಿನ ತೋಟಗಳಿಂದ ಎಳನೀರು ಕೊಯ್ಲು ಮಾಡುತ್ತಿದ್ದಾರೆ. ಒಂದು ಎಳನೀರಿಗೆ 20-25 ರೂ.ದರವನ್ನು ರೈತರಿಗೆ ನೀಡುತ್ತಿದ್ದಾರೆ. ಆದ್ದರಿಂದ ದೊಡ್ಡ ತಲೆನೋವೂ ತಪ್ಪುತ್ತದೆ. ಎಂದರೆ, ತೆಂಗಿನಕಾಯಿಯಾದರೆ ಬಲಿತಿರುವುದನ್ನು ಕೊಯ್ಲುಮಾಡಿ, ದಾಸ್ತಾನಿರಿಸಿ ಸಗಟು ವ್ಯಾಪಾರಿಯನ್ನು ಹುಡುಕಬೇಕು. ಆದರೆ ಒಂದು ದೊಡ್ಡ ತೆಂಗಿನಕಾಯಿಯಾದರೋ 18-20 ರೂಪಾಯಿಗಿಂತ ಹೆಚ್ಚಿಗೆ ಲಭಿಸುವ ಖಾತರಿಯಿಲ್ಲ. ರೈತನಿಗೆ 20 ರೂ. ಎಳನೀರಿಗೆ ಲಭಿಸುತ್ತದೆ. ಬೀದಿಬದಿ ವ್ಯಾಪಾರಿಗಳು 35 ರಿಂದ 40 ರೂ.ಗಳ ವರೆಗೆ ಎಳನೀರು ಕತ್ತರಿಸಿ ವಿಕ್ರಯಿಸಿ ಲಾಭಪಡೆಯುತ್ತಾರೆ.
ನಾವು ರಸ್ತೆಬದಿಯಲ್ಲಿ ಕಾಣುವ ಎಳನೀರು ಮಾರುವವರು ಕೇವಲ ಸರಪಳಿಯ ಕೊಂಡಿ ಮಾತ್ರ. ಅವರಲ್ಲಿ ಹಲವರು ಕೇವಲ ಕಾರ್ಮಿಕರು. ಸಗಟು ವ್ಯಾಪಾರಿ ಅವರ ಹಿಂದೆ ಇರಬಹುದು. ಪ್ರತಿ ಮಳಿಗೆಗೆ ಲಾರಿಯಲ್ಲಿ ಎಳನೀರು ತಂದ ನಂತರ ಹಿಂತಿರುಗುತ್ತಾರೆ. ನೌಕರನ ಸಂಬಳವನ್ನು ತೆಗೆದುಕೊಂಡ ನಂತರ, ಉಳಿದವು ವ್ಯಾಪಾರಿಗೆ ಹೋಗುತ್ತದೆ. ವ್ಯಾಪಾರಿಗಳಿಂದ ಎಳನೀರು ಖರೀದಿಸಿ ನೇರವಾಗಿ ಮಾರಾಟ ಮಾಡುವವರೂ ಇದ್ದಾರೆ.
ಆದರೆ, ಸಮಸ್ಯೆ ಇರುವುದು ಭವಿಷ್ಯದಲ್ಲಿ. ಮುಂದಿನ ದಿನಗಳಲ್ಲಿ ಹಸಿ ತೆಂಗಿನ ಹಾಗೂ ಕೊಬ್ಬರಿಯ ಕೊರತೆ ಕಾಡುವ ಭೀತಿ ಇದೆ. ಜೊತೆಗೆ ಬೆಲೆ ಏರಿಕೆಯ ಭಯವೂ ಬಾಧಿಸಿ ಜನಸಾಮಾನ್ಯರು ಹೈರಾಣರಾಗುವ ಸಾಧ್ಯತೆ ನಿಚ್ಚಳವೆಂಬುದು ಸ್ಥಳೀಯ ವಿದ್ಯಮಾನದ ಸಾಕ್ಷಿ.


