ಕಾಸರಗೋಡು: ಜಿಲ್ಲೆಯ ನಾನಾ ಶಿವ ದೇವಾಲಯಗಳಲ್ಲಿ ಶಿವರಾತ್ರಿ ಮಹೋತ್ಸವ ಶುಕ್ರವರ ಭಕ್ತಿ, ಸಂಭ್ರಮದೊಂದಿಗೆ ನಡೆಯಿತು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಗಣಪತಿ ಹವನ, ಶತರುದ್ರಾಭಿಷೇಕ, ಶ್ರೀದೇವರ ಬಲಿ ಉತ್ಸವ, ನವಕಾಭಿಷೇಕ, ಶ್ರೀಭೂತಬಲಿ ಉತ್ಸವ ನಡೆಯಿತು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಗ್ಗೆ ಉಷ:ಪೂಜೆಯ ನಂತರ ವಿವಿಧ ಭಜನಾ ತಂಡಗಳಿಂದ ಸಂಜೆ ಉದಯಾಸ್ತಮಾನ ಭಜನಾಸೇವೆ, ಶಿವಪಂಚಾಕ್ಷರೀ ಜಪ, ನಂತರ ಶ್ರೀ ದೇವರ ಉತ್ಸವಬಲಿ, ರಜಾಂಗಣ ಪ್ರಸಾದ ನಡೆಯಿತು.
ಪಾಡಿ ಕೈಲಾರ್ ಶ್ರೀ ಶಿವಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವ ವಿವಿಧ ಕಾರ್ಯಕ್ರಮಗೊಂದಿಗೆ ನಡೆಯಿತು. ಸಂಕಲ್ಪಾಭಿಷೇಕ, ಏಕಾದಶ ರುದ್ರಾಭಿಷೇಕ, ಭಜನೆ ನಡೆಯಿತು.
ತ್ರಿಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನ, ವರ್ಕಾಡಿ ಬಾಕ್ರಬೈಲು ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನ, ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶಿರಿಯ ಶ್ರೀ ಶಂಕರನಾರಾಯಣ ದೇವಸ್ಥಾನ, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಪುತ್ತಿಗೆ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಶಿವಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪೆರ್ಲ ಬಜಕೂಡ್ಲು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರ ಭಜನಾಸಂಘದ 39ನೇ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಭಜನೆ ನಡೆಯಿತು. ಶಿವರಾತ್ರಿ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬಲಿವಾಡುಕೂಟ, ದೀಪ ಪ್ರತಿಷ್ಠೆಯೊಂದಿಗೆ ಭಜನೆ ನಡೆಯಿತು.


