ಕಾಸರಗೋಡು: ವಯನಾಡ್‍ಪೂಕಾಟ್ ವೆಟರಿನರಿ ಕಾಲೇಜು ವಿದ್ಯಾರ್ಥಿ ಜೆ.ಎಸ್ ಸಿದ್ಧಾರ್ಥ್ ಸಾವಿನ ಪ್ರಕರಣದ ಆರೋಪಿಗಳನ್ನು ಪೊಲೀಸರು ಮತ್ತು ಸರ್ಕಾರ ರಕ್ಷಿಸುತ್ತಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವಂತೆ ಆಗ್ರಹಿಸಿ ಎಂಎಸ್‍ಎಫ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಪ್ರತಿಭಟನಾಕಾರರು ಪೊಲೀಸ್ ಬಾರಿಕೇಡ್ ದಾಟಿ ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಪ್ರತಿಭಟನಾ ಸಭೆಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಎಂಎಸ್‍ಎಫ್ ಜಿಲ್ಲಾಧ್ಯಕ್ಷ ತ್ವಾಹಾ ಚೇರೂರ್ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಸವಾದ್ ಅಮಗಡಿಮೊಗರು, ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಸೀಸ್ ಕಳತ್ತೂರ್, ಸಯ್ಯದ್ ಸೈಫುದ್ದೀನ್ ಸೇರಿದಂತೆ ಹಲವು ಮಂದಿ ಪಆಲ್ಗೊಂಡಿದ್ದರು.
ಕಾರ್ಯಕರ್ತರಿಗೆ ಕೇಸು: ಜಿಲ್ಲಾಧಿಕಾರಿ ಕಚೇರಿ ಎದುರು ಅನುಮತಿ ರಹಿತ ಪ್ರತಿಭಟನೆ, ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ, ವಾಹನ ಸಂಚಾರಕ್ಕೆ ಅಡಚಣೆಯೊಡ್ಡಿದ ಪ್ರಕರಣಗಳಿಗೆ ಸಂಬಂಧಿಸಿ ಎಂಎಸ್‍ಎಫ್ ಸಂಘಟನೆಯ 40ರಷ್ಟು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

