ನವದೆಹಲಿ (PTI): ಸಾಗರೋತ್ತರ ಭಾರತೀಯ ಪ್ರಜೆಗಳ (ಒಸಿಐ) ಕಾರ್ಡ್‌ದಾರರು ಮತ್ತು ಪೂರ್ವಪರಿಶೀಲನೆಗೆ ಒಳಗಾದ ಭಾರತೀಯ ಪ್ರಜೆಗಳ ವಲಸಿಗರ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶದ ವಿಶೇಷ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್ ಶಾ ಶನಿವಾರ ಇಲ್ಲಿ ಚಾಲನೆ ನೀಡಿದರು.
0
samarasasudhi
ಜೂನ್ 23, 2024
ನವದೆಹಲಿ (PTI): ಸಾಗರೋತ್ತರ ಭಾರತೀಯ ಪ್ರಜೆಗಳ (ಒಸಿಐ) ಕಾರ್ಡ್‌ದಾರರು ಮತ್ತು ಪೂರ್ವಪರಿಶೀಲನೆಗೆ ಒಳಗಾದ ಭಾರತೀಯ ಪ್ರಜೆಗಳ ವಲಸಿಗರ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶದ ವಿಶೇಷ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್ ಶಾ ಶನಿವಾರ ಇಲ್ಲಿ ಚಾಲನೆ ನೀಡಿದರು.
ಈ 'ಕ್ಷಿಪ್ರಗತಿಯ ವಲಸಿಗರು ಹಾಗೂ ವಿಶ್ವಾಸಾರ್ಹ ಪ್ರಯಾಣಿಕ ಕಾರ್ಯಕ್ರಮ'ವು (ಎಫ್‌ಟಿಐ-ಟಿಟಿಪಿ) ಸರ್ಕಾರದ ದೂರದರ್ಶಿತ್ವ ಚಿಂತನೆಯ ಫಲವಾಗಿದ್ದು, ಸಮಗ್ರ ಚಿಂತನೆಯ ಬಳಿಕ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಅರ್ಹ ನಾಗರಿಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಬಯೊಮೆಟ್ರಿಕ್ (ಬೆರಳಚ್ಚು, ಮುಖಚಹರೆ) ವಿವರ ನೀಡಬೇಕು. ಜೊತೆಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನೂ ಸಲ್ಲಿಸಬೇಕು. ಎಫ್‌ಟಿಐ ನೋಂದಣಿಯು ಗರಿಷ್ಠ 5 ವರ್ಷ ಅಥವಾ ಪಾಸ್‌ಪೋರ್ಟ್ ಅವಧಿಯವರೆಗೆ ಊರ್ಜಿತವಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಅರ್ಜಿಯು ಅಂಗೀಕಾರವಾದ ಬಳಿಕ ಅರ್ಜಿದಾರರಿಗೆ ಬಯೊಮೆಟ್ರಿಕ್ ವಿವರವನ್ನು ಸಲ್ಲಿಸುವ ಸಂಬಂಧ ಸಮಯವನ್ನು ನಿಗದಿಪಡಿಸಿ ಸಂದೇಶ ಕಳುಹಿಸಲಾಗುತ್ತದೆ. ಸಮೀಪದ ನಿಗದಿತ ವಿಮಾನನಿಲ್ದಾಣ ಅಥವಾ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ನಿಗದಿತ ದಿನದಂದು ತೆರಳಿ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಪ್ರಕ್ರಿಯೆಯು ಪೂರ್ಣಗೊಳ್ಳಲು ಬಯೊಮಟ್ರಿಕ್ ವಿವರವನ್ನು ಒದಗಿಸುವುದು ಕಡ್ಡಾಯವಾಗಿದೆ. ಎಫ್‌ಟಿಐ-ಟಿಟಿಪಿಗೆ ಅರ್ಜಿಸಲ್ಲಿಸುವ ಮೊದಲು ನಾಗರಿಕರು ತಮ್ಮ ತಮ್ಮ ಪಾರ್ಸ್‌ಪೋರ್ಟ್‌ನ ಅವಧಿಯು ಇನ್ನೂ ಆರು ತಿಂಗಳು ಊರ್ಜಿತವಾಗಿರಲಿದೆ ಎಂದೂ ಖಾತರಿಪಡಿಸಿಕೊಳ್ಳುವುದು ಅಗತ್ಯ. ಅರ್ಜಿಯು ತಿರಸ್ಕೃತಗೊಳ್ಳುವುದನ್ನು ತಡೆಯಲು ಅರ್ಜಿದಾರರು ಹಾಲಿ ವಾಸಸ್ಥಳದ ವಿಳಾಸವನ್ನು ಸಲ್ಲಿಸುವುದು ಅಗತ್ಯ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಜನರ ಪ್ರಯಾಣದ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಎಫ್‌ಟಿಐ-ಟಿಟಿಪಿ ಗುರಿಯಾಗಿದೆ. ಇದು, ಸುಭದ್ರವಾಗಿದ್ದು ತ್ವರಿತ ಮತ್ತು ಸುಗಮವೂ ಆಗಿದೆ. ಪ್ರಯಾಣ ಸೇವೆ ಒದಗಿಸುವಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಇದು ತೋರಿಸಲಿದೆ ಎಂದು ಅವರು ತಿಳಿಸಿದ್ದಾರೆ.