ನವದೆಹಲಿ :ಶನಿವಾರ ಇಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 53ನೇ ಸಭೆಯಲ್ಲಿ ಕೆಲವು ಉತ್ಪನ್ನಗಳು ಮತ್ತು ಸೇವೆಗಳಿಗೆ ತೆರಿಗೆ ದರಗಳನ್ನು ಪರಿಷ್ಕರಿಸಲಾಗಿದೆ.
ಜಿಎಸ್‌ಟಿ ಮಂಡಳಿಯು ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಹೊರಗಿನ ಹಾಸ್ಟೆಲ್ ವಸತಿ ಮೂಲಕ ಪ್ರತಿ ವ್ಯಕ್ತಿಗೆ ತಿಂಗಳಿಗೆ 20,000 ರೂ.ವರೆಗೆ ಸೇವೆಗಳಿಗೆ ವಿನಾಯಿತಿಯನ್ನು ನೀಡಿದೆ.
ರೈಲ್ವೆ ಟಿಕೆಟ್‌ಗಳ ಖರೀದಿ ಹಾಗೂ ವೇಟಿಂಗ್ ರೂಮ್ ಮತ್ತು ಕ್ಲೋಕ್ ರೂಮ್ ಶುಲ್ಕಗಳ ಪಾವತಿಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ಇದೇ ರೀತಿ ಬ್ಯಾಟರಿ ಚಾಲಿತ ವಾಹನಗಳ ಸೇವೆ ಮತ್ತು ರೈಲುಗಳ ಒಳಗಿನ ಸೇವೆಗಳಿಗೆ ಜಿಎಸ್‌ಟಿ ವಿಧಿಸಲಾಗುವುದಿಲ್ಲ.
ತೆರಿಗೆ ಬೇಡಿಕೆ ನೋಟಿಸ್‌ಗಳ ಮೇಲೆ ದಂಡಗಳಿಗೆ ಬಡ್ಡಿಯ ಮನ್ನಾಕ್ಕೆ ಮತ್ತು ಹಾಲಿನ ಕ್ಯಾನ್‌ಗಳ ಮೇಲೆ ಶೇ.12ರ ಏಕರೂಪ ದರವನ್ನು ಮಂಡಳಿಯು ಶಿಫಾರಸು ಮಾಡಿದೆ.
ಜಿಎಸ್‌ಟಿ ಮಂಡಳಿ ಸಭೆಗೆ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಅವರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆಗಳನ್ನು ನಡೆಸಿದರು.





