HEALTH TIPS

ಇಸ್ರೇಲ್-ಹಮಾಸ್ ಯುದ್ಧ ಕೊನೆಗೊಳಿಸುವ ನಿರ್ಣಯಕ್ಕೆ ಭದ್ರತಾ ಮಂಡಳಿ ಒಪ್ಪಿಗೆ

           ವಿಶ್ವಸಂಸ್ಥೆ: ಇಸ್ರೇಲ್ ಮತ್ತು ಹಮಾಸ್ ನಡುವೆ ಎಂಟು ತಿಂಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಕದನವಿರಾಮ ಯೋಜನೆಯನ್ನು ಅನುಮೋದಿಸುವ ಮೊದಲ ನಿರ್ಣಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸೋಮವಾರ ಒಪ್ಪಿಗೆ ನೀಡಿದೆ.

           ಅಮೆರಿಕ ರೂಪಿಸಿರುವ ಈ ನಿರ್ಣಯವು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪ್ರಕಟಿಸಿರುವ ಕದನವಿರಾಮ ಪ್ರಸ್ತಾವವನ್ನು ಸ್ವಾಗತಿಸಿದೆ. ಈ ಪ್ರಸ್ತಾವಕ್ಕೆ ಇಸ್ರೇಲ್ ಒಪ್ಪಿದೆ ಎಂದು ಅಮೆರಿಕ ಹೇಳಿದೆ.

           ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 14 ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿವೆ. ಮಂಡಳಿಯ ಸದಸ್ಯ ರಾಷ್ಟ್ರವಾದ ರಷ್ಯಾ ಮತದಾನದಿಂದ ದೂರ ಉಳಿದಿತ್ತು. ಇಸ್ರೇಲ್ ಮತ್ತು ಹಮಾಸ್‌ 'ಕದನ ವಿರಾಮದ ನಿಯಮಗಳನ್ನು ಬೇಷರತ್ತಾಗಿ ಅನುಷ್ಠಾನಕ್ಕೆ ತರಬೇಕು' ಎಂದು ನಿರ್ಣಯವು ಹೇಳಿದೆ.

               ಆದರೆ ಕದನ ವಿರಾಮ ಪ್ರಸ್ತಾವನೆಯನ್ನು ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಳ್ಳುತ್ತವೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಹೀಗಿದ್ದರೂ, ಭದ್ರತಾ ಮಂಡಳಿಯ ನಿರ್ಣಯವು ಇಸ್ರೇಲ್ ಹಾಗೂ ಹಮಾಸ್ ಮೇಲೆ ಹೆಚ್ಚಿನ ಒತ್ತಡ ತರಲಿದೆ.

          ಪ್ರಸ್ತಾವವನ್ನು ಪೂರ್ಣವಾಗಿ ಒಪ್ಪಿಲ್ಲದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್‌ ಬಂಡುಕೋರ ಸಂಘಟನೆಯನ್ನು ನಾಶಮಾಡುವ ಬದ್ಧತೆಯಿಂದ ಇಸ್ರೇಲ್ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ. ನಿರ್ಣಯ ಅಂಗೀಕಾರ ಆಗಿರುವುದನ್ನು ಹಮಾಸ್ ಸ್ವಾಗತಿಸಿದೆ. ಆದರೆ ಇಸ್ರೇಲ್‌ನ ಅತಿಕ್ರಮಣದ ವಿರುದ್ಧದ ಹೋರಾಟವನ್ನು ತಾನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.

ಹಮಾಸ್‌ ಮಾತು ಭರವಸೆ ಮೂಡಿಸುವಂತಿದೆ: ಅಮೆರಿಕ

              ಟೆಲ್ ಅವಿವ್/ಕೈರೊ (ರಾಯಿಟರ್ಸ್): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಬೆಂಬಲ ಸೂಚಿಸಿ ಹಮಾಸ್ ನೀಡಿರುವ ಹೇಳಿಕೆಯು 'ಭರವಸೆ ಮೂಡಿಸುವ ಸೂಚನೆ' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಹೇಳಿದ್ದಾರೆ.

             ಯುದ್ಧವನ್ನು ಕೊನೆಗೊಳಿಸುವ ಯತ್ನಗಳ ಭಾಗವಾಗಿ ಬ್ಲಿಂಕನ್ ಅವರು ಇಸ್ರೇಲ್‌ನ ಅಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಿದರು. ಗಾಜಾದ ಹೊರಗೆ ನೆಲಸಿರುವ ಹಮಾಸ್‌ ಹಿರಿಯ ಅಧಿಕಾರಿ ಸಮಿ ಅಬು ಜುಹ್ರಿ ಅವರು ಕದನವಿರಾಮ ನಿರ್ಣಯವನ್ನು ಸಂಘಟನೆಯು ಒಪ್ಪಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

            ಕದನವಿರಾಮಕ್ಕೆ ಸಂಬಂಧಿಸಿದ ವಿವರಗಳ ಬಗ್ಗೆ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ. ಆದರೆ ಕದನ ವಿರಾಮಕ್ಕೆ ಇಸ್ರೇಲ್ ಕೂಡ ಒಪ್ಪುವಂತೆ ಮಾಡುವುದು ಅಮೆರಿಕದ ಹೊಣೆ ಎಂದು ಅವರು ಹೇಳಿದ್ದಾರೆ.

              ಹಮಾಸ್‌ ನೀಡಿರುವ ಹೇಳಿಕೆಯು ಭರವಸೆ ಮೂಡಿಸುವಂತೆ ಇದೆಯಾದರೂ ಗಾಜಾದಲ್ಲಿ ಇರುವ ಹಮಾಸ್‌ ನಾಯಕತ್ವದ ಕಡೆಯಿಂದ ಖಚಿತವಾದ ಮಾತುಗಳು ಬರಬೇಕಿವೆ ಎಂದು ಬ್ಲಿಂಕನ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries